ಅಮೆರಿಕದ ವಾಯುಪ್ರದೇಶದಲ್ಲಿ ಚೀನೀ ಬೇಹುಗಾರಿಕೆ ಬಲೂನ್ ಪತ್ತೆ: ಪೆಂಟಗಾನ್

Update: 2023-02-03 17:40 GMT

ವಾಷಿಂಗ್ಟನ್, ಫೆ.3: ಅಮೆರಿಕದ ವಾಯುಪ್ರದೇಶದ ಮೇಲೆ ಶಂಕಿತ ಚೀನೀ ಬೇಹುಗಾರಿಕೆ ಬಲೂನು 2 ದಿನ ಹಾರಾಟ ನಡೆಸಿರುವುದನ್ನು ಪತ್ತೆಹಚ್ಚಲಾಗಿದೆ. ಆದರೆ ಅದನ್ನು ಹೊಡೆದುರುಳಿಸಿದರೆ ಅದರ ಅವಶೇಷಗಳಿಂದ  ನೆಲದ ಮೇಲಿದ್ದವರಿಗೆ ಹಾನಿಯಾಗುತ್ತದೆ ಎಂಬ ಕಾರಣದಿಂದ ಶೂಟ್ ಮಾಡದಿರಲು ನಿರ್ಧರಿಸಲಾಗಿತ್ತು ಎಂದು ಪೆಂಟಗಾನ್ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. 

ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಈ ವಿದ್ಯಮಾನ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. 

ಚೀನಾದ ಈ ಬಲೂನು ಮಾಹಿತಿ ಸಂಗ್ರಹಿಸಲು ಸೂಕ್ಷ್ಮ ಪ್ರದೇಶಗಳ ಮೇಲೆ ಹಾರಾಡುತ್ತಿದೆ ಎಂಬ ಬಗ್ಗೆ ಅಮೆರಿಕಕ್ಕೆ ದೃಢವಾಗಿದೆ. ಬಲೂನು ಪತ್ತೆಯಾದ ಒಂದು ಸ್ಥಳ ಮೊಟಾನಾದ ಮಾಲ್ಮ್‌ಸ್ಟ್ರಾಮ್  ವಾಯುನೆಲೆಯಲ್ಲಿ ಅಮೆರಿಕದ ಮೂರು ಪರಮಾಣು ಕ್ಷಿಪಣಿಗಳಲ್ಲಿ ಒಂದನ್ನು ನೆಲೆಗೊಳಿಸಲಾಗಿದೆ. ಈ ಬಲೂನಿನ ಮೇಲೆ ನಿರಂತರ ನಿಗಾ ಇಡಲಾಗಿದೆ. ಪ್ರಸ್ತುತ ಇದು ವಾಣಿಜ್ಯ ವಿಮಾನಗಳ ಹಾರಾಟ ವಲಯಕ್ಕಿಂತ ಎತ್ತರದಲ್ಲಿ ಹಾರಾಟ ನಡೆಸುತ್ತಿರುವುದರಿಂದ ಯಾವುದೇ ಮಿಲಿಟರಿ ಬೆದರಿಕೆ ಅಥವಾ ನೆಲದಲ್ಲಿರುವ ಜನರಿಗೆ ದೈಹಿಕ ಬೆದರಿಕೆ ಎದುರಾಗಿಲ್ಲ . ಈ ಹಿಂದಿನ ಕೆಲ ದಿನಗಳಲ್ಲೂ ಇದೇ ರೀತಿಯ ಬಲೂನು ಪತ್ತೆಯಾಗಿದೆ. ಬಲೂನುಗಳ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಪೆಂಟಗಾನ್  ನ ಪತ್ರಿಕಾ ಕಾರ್ಯದರ್ಶಿ ಬ್ರಿ.ಜ. ಪ್ಯಾಟ್ರಿಕ್ ರೈಡರ್ ಹೇಳಿದ್ದಾರೆ.

ಅಧ್ಯಕ್ಷ ಬೈಡನ್ರಿಗೆ ವರದಿ ನೀಡಲಾಗಿದ್ದು ಅವರು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆಯ್ಕೆಗಳನ್ನು ಒದಗಿಸುವಂತೆ ಸೇನೆಗೆ ಸೂಚಿಸಿದ್ದಾರೆ ಎಂದು ಹಿರಿಯ ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ. ಬಲೂನನ್ನು ಹೊಡೆದುರುಳಿಸಿದರೆ ನೆಲದ ಮೇಲಿರುವ ಜನರ ಸುರಕ್ಷತೆಗೆ ಅಪಾಯ ಬರಬಹುದು ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಸೇನೆಯ ಜನರಲ್ ಮಾರ್ಕ್ ಮಿಲಿ ನೀಡಿದ ಸಲಹೆಯನ್ನು ಬೈಡನ್ ಒಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ಗಂಭೀರತೆಯ ಬಗ್ಗೆ ಚೀನಾದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಮೆರಿಕ ಹೇಳಿದೆ. ಈ ವಾರಾಂತ್ಯದಲ್ಲಿ ನಿಗದಿಯಾಗಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ಚೀನಾ ಪ್ರವಾಸ ಕಾರ್ಯಕ್ರಮದ ಮೇಲೆ ಈ ವಿದ್ಯಮಾನ ಪರಿಣಾಮ ಬೀರುವ ಸಾಧ್ಯತೆಯಿದೆ. `ದಿ ಬಿಲ್ಲಿಂಗ್ಸ್ ಗಝೆಟ್' ಪತ್ರಿಕೆಯ ಫೋಟೋಗ್ರಾಫರ್ ಲ್ಯಾರಿ ಮೇಯರ್ ಈ ಬಲೂನಿನ ಫೋಟೋವನ್ನು ಮೊದಲು ಸೆರೆಹಿಡಿದಿದ್ದರು. 

ಈ ಬಲೂನು ಹಾರಾಡುತ್ತಿದ್ದ ಎತ್ತರ ಮತ್ತು ಒಂದೇ ಪ್ರದೇಶದ ಮೇಲೆ ಹಲವು ಗಂಟೆಗಳ ಕಾಲ ನಿಶ್ಚಲವಾಗಿ ನಿಂತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಲೂನು ಮೊ0ಟಾನಾದ ಮಾಲ್ಮ್ಸ್ಟ್ರಾಮ್ ವಾಯುನೆಲೆಯ ಮೇಲೆ ಹಾರಾಟ ನಡೆಸಿರುವುದು ವಾಯುನೆಲೆ ಮತ್ತು ಅಮೆರಿಕದ ಖಂಡಾಂತರ ಕ್ಷಿಪಣಿ ಕ್ಷೇತ್ರಗಳು ಈ ಗುಪ್ತಚರ ಬಲೂನ್ನ ಕಾರ್ಯಕ್ಷೇತ್ರವಾಗಿದೆ ಎಂಬುದನ್ನು ಸೂಚಿಸುತ್ತದೆ. ದೇಶದ ಭದ್ರತೆಗೆ ಹಾನಿಯುಂಟು ಮಾಡುವ ಒಳಸಂಚಿನ ಭಾಗ ಇದಾಗಿರಬಹುದೇ ಎಂಬ ಬಗ್ಗೆಯೂ ಗಮನ ಹರಿಸಬೇಕಿದೆ ಎಂದು ಅಮೆರಿಕದ ಸೆನೆಟರ್ ಸ್ಟೀವ್ ಡೈನ್ಸ್ ಆಗ್ರಹಿಸಿದ್ದಾರೆ.

ವರದಿ ಪರಿಶೀಲನೆ: ಚೀನಾ

ಅಮೆರಿಕದ ವಾಯುಕ್ಷೇತ್ರದ ಮೇಲೆ ಗುಪ್ತಚರ ಬಲೂನು ಹಾರಾಡಿದೆ ಎಂಬ ಅಮೆರಿಕದ ಪ್ರತಿಪಾದನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಚೀನಾ ಶುಕ್ರವಾರ ಹೇಳಿದ್ದು, ಈ ಪ್ರಕರಣದ ಬಗ್ಗೆ ಉತ್ಪ್ರೇಕ್ಷೆಯ ಹೇಳಿಕೆಯ ವಿರುದ್ಧ ಎಚ್ಚರಿಕೆ ನೀಡಿದೆ.
ಅಮೆರಿಕದ ಪೆಂಟಗಾನ್ ನ ವರದಿಯ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ವಿಷಯಗಳು ಸ್ಪಷ್ಟ ಆಗುವವರೆಗೆ ಊಹೆಯನ್ನು ಮಾಡುವುದು ಮತ್ತು ಉತ್ಪ್ರೇಕ್ಷೆಯ ಹೇಳಿಕೆ ನೀಡುವುದು ಈ ವಿಷಯವನ್ನು ಸೂಕ್ತವಾಗಿ ಇತ್ಯರ್ಥಪಡಿಸಲು ಅಡ್ಡಿಯಾಗಲಿದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಚೀನಾ ಜವಾಬ್ದಾರಿಯುತ ದೇಶವಾಗಿದ್ದು ಅಂತರಾಷ್ಟ್ರೀಯ ಕಾನೂನಿಗೆ ಯಾವತ್ತೂ ಬದ್ಧವಾಗಿದೆ. ಯಾವುದೇ ಸಾರ್ವಭೌಮ ದೇಶದ ಪ್ರದೇಶ ಅಥವಾ ವಾಯುಕ್ಷೇತ್ರವನ್ನು ಉಲ್ಲಂಘಿಸುವ ಉದ್ದೇಶ ನಮಗಿಲ್ಲ. ಈ ವಿಷಯವನ್ನು ಎರಡೂ ಕಡೆಯವರು ಪರಸ್ಪರ ಶಾಂತತೆ ಮತ್ತು ವಿವೇಕದಿಂದ ನಿರ್ವಹಿಸುವ ವಿಶ್ವಾಸವಿದೆ ಎಂದವರು ಹೇಳಿದ್ದಾರೆ.

Similar News