​ಬ್ರೆಝಿಲ್: 6 ದಶಕ ಹಳೆಯ ಯುದ್ಧನೌಕೆ ನಾಶಕ್ಕೆ ನಿರ್ಧಾರ

Update: 2023-02-03 18:14 GMT

ಬ್ರಸೀಲಿಯಾ, ಫೆ.3: ಸುಮಾರು 30,000 ಟನ್ ಗಳಷ್ಟು ವಿಷಕಾರಿ ಪ್ಯಾಕೇಜ್ ಅನ್ನು ಒಳಗೊಂಡಿದೆ ಎನ್ನಲಾದ 6 ದಶಕಗಳ ಹಿಂದಿನ ಯುದ್ಧನೌಕೆಯನ್ನು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿಸಿ ನಾಶಗೊಳಿಸಲು ಯೋಜಿಸಿರುವುದಾಗಿ ಬ್ರೆಝಿಲ್ ಹೇಳಿದೆ. 

ಹಾನಿಗೊಳಗಾದ ಈ ಯುದ್ಧನೌಕೆಯನ್ನು ಸ್ವೀಕರಿಸಲು ಯಾವುದೇ ಬಂದರು ಸಿದ್ಧವಿಲ್ಲದ ಕಾರಣ ಸಾವೊಪಾಲೊ ಎಂಬ ಈ ನೌಕೆಯನ್ನು ಸಾಗರದಲ್ಲಿ ಯೋಜಿತ ಮತ್ತು ನಿಯಂತ್ರಿತ ರೀತಿಯಲ್ಲಿ ಮುಳುಗಿಸದೆ ಬೇರೆ ಆಯ್ಕೆಗಳಿಲ್ಲ ಎಂದು ಬ್ರೆಝಿಲ್ನ ನೌಕಾಪಡೆಯ ಹೇಳಿಕೆ ತಿಳಿಸಿದೆ.
ಆದರೆ ಸರಕಾರದ ನಿರ್ಧಾರಕ್ಕೆ ಪರಿಸರವಾದಿಗಳಿಂದ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದೆ.

ಈ ವಿಮಾನವಾಹಕ ನೌಕೆಯಲ್ಲಿ ಟನ್ಗಟ್ಟಲೆ ಕಲ್ನಾರು, ಭಾರವಾದ ಲೋಹಗಳು ಮತ್ತಿತರ ವಿಷಕಾರಿ ವಸ್ತುಗಳಿದ್ದು ಇದು ನೀರನ್ನು ಸೇರಿಕೊಂಡು ಸಮುದ್ರದ ಆಹಾರ ಸರಪಳಿಯನ್ನು ಮಲಿನಗೊಳಿಸಲಿದೆ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ. ಬ್ರೆಝಿಲ್ ನೌಕಾಪಡೆ ಈ ವಿಷಯದಲ್ಲಿ ತೀವ್ರ ನಿರ್ಲಕ್ಷ ತೋರಿದೆ.

ಅವರು ಈ ವಿಷಯುಕ್ತ ನೌಕೆಯನ್ನು ಅಟ್ಲಾಂಟಿಕ್ ಸಾಗರದ ತಳದಲ್ಲಿ ಬಿಸಾಡಲು ಹೊರಟರೆ ಮೂರು ಅಂತರಾಷ್ಟ್ರೀಯ ಪರಿಸರ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಬಾಸೆಲ್ ಕ್ರಿಯಾಪಡೆಯ ನಿರ್ದೇಶಕ ಜಿಮ್ ಪಕೆಟ್ ಖಂಡಿಸಿದ್ದು, ಈ ನಿರ್ಧಾರವನ್ನು ಹಿಂಪಡೆಯಲು ಮಧ್ಯಪ್ರವೇಶಿಸುವಂತೆ ಅಧ್ಯಕ್ಷರನ್ನು ಆಗ್ರಹಿಸಿದ್ದಾರೆ.

1950ರಲ್ಲಿ ಫ್ರಾನ್ಸ್ನಲ್ಲಿ ನಿರ್ಮಿಸಲಾದ 873 ಅಡಿ ಉದ್ದದ  ಈ ಯುದ್ಧನೌಕೆ ಆ ದೇಶದ ನೌಕಾಪಡೆಯಲ್ಲಿ ಸುಮಾರು 37 ವರ್ಷ ಸೇವೆ ಸಲ್ಲಿಸಿತ್ತು. 2000ನೇ ಇಸವಿಯಲ್ಲಿ ಈ ಯುದ್ಧನೌಕೆಯನ್ನು ಬ್ರೆಝಿಲ್ 12 ದಶಲಕ್ಷ ಡಾಲರ್ ಮೊತ್ತಕ್ಕೆ ಖರೀದಿಸಿತ್ತು.

Similar News