ರಶ್ಯ ಉದ್ಯಮಿಗಳಿಂದ ವಶಪಡಿಸಿದ ಹಣ ಉಕ್ರೇನ್ ಗೆ ನೀಡಲಿರುವ ಅಮೆರಿಕ

Update: 2023-02-04 17:20 GMT

ವಾಷಿಂಗ್ಟನ್, ಫೆ.5: ಅಮೆರಿಕದಲ್ಲಿ ರಶ್ಯನ್ ಉದ್ಯಮಿಗಳು ಹೂಡಿಕೆ ಮಾಡಿದ್ದ ಹಣವನ್ನು ಉಕ್ರೇನ್ಗೆ ನೆರವಿನ ರೂಪದಲ್ಲಿ ಒದಗಿಸಲು ಅಮೆರಿಕ ಸರಕಾರಕ್ಕೆ ಅಧಿಕಾರ ನೀಡಲಾಗಿದೆ ಎಂದು ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಶುಕ್ರವಾರ ಹೇಳಿದ್ದಾರೆ.

ರಶ್ಯವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ಹಿನ್ನೆಲೆಯಲ್ಲಿ ರಶ್ಯದ ಹಲವು ಪ್ರಭಾವೀ ಉದ್ಯಮಿಗಳು ಅಮೆರಿಕದ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಅಮೆರಿಕ ಸ್ಥಂಭನಗೊಳಿಸಿತ್ತು. ರಶ್ಯದ ಆಕ್ರಮಣದಿಂದ ತನಗಾಗಿರುವ ನಷ್ಟವನ್ನು ರಶ್ಯದಿಂದ ಭರಿಸಿಕೊಡಬೇಕು ಎಂದು ಉಕ್ರೇನ್ ಪ್ರತಿಪಾದಿಸುತ್ತಿದೆ. ಈ ನಿಟ್ಟಿನಲ್ಲಿ ಉಕ್ರೇನ್ನ ಪ್ರಾಸಿಕ್ಯೂಟರ್ ಜನರಲ್ ಆಂಡ್ರಿಯ್ ಕೋಸ್ಟಿನ್ ವಾಷಿಂಗ್ಟನ್ಗೆ ಭೇಟಿ ನೀಡಿ ಅಮೆರಿಕದ ಪ್ರಾಸಿಕ್ಯೂಟರ್ ಜನರಲ್ ಜತೆ ಮಾತುಕತೆ ನಡೆಸಿದ್ದರು.

ರಶ್ಯದ ಪ್ರಭಾವೀ ಉದ್ಯಮಿ ಕಾನ್ಸ್ಟಾಂಟಿನ್ ಮಲೊಫೆಯೆವ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಈ ಮೊತ್ತವು ಅಮೆರಿಕದ ವಿದೇಶಾಂಗ ಇಲಾಖೆಯ ಖಾತೆಗೆ ಜಮೆಯಾಗಲಿದೆ. ಇದನ್ನು ಉಕ್ರೇನ್ನ ಜನತೆಗೆ ಬೆಂಬಲ ನೀಡಲು ಬಳಸಲಾಗುವುದು ಎಂದು  ಗಾರ್ಲ್ಯಾಂಡ್ರನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.

ಈ ಘೋಷಣೆಯನ್ನು ಸ್ವಾಗತಿಸಿರುವ ಕೋಸ್ಟಿನ್ `ರಶ್ಯದ ಅಕ್ರಮ ಯುದ್ಧದಿಂದಾಗಿ ಎಲ್ಲಾ ಉಕ್ರೇನಿಯನ್ನರೂ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸಿದ್ದಾರೆ. ಅವರಿಗಾದ ಭಾರೀ ಹಾನಿಗೆ ಕಿಂಚಿತ್ತಾದರೂ ಪರಿಹಾರ ದೊರಕುತ್ತಿರುವುದು ಸಮಾಧಾನ ತಂದಿದೆ' ಎಂದು ಟ್ವೀಟ್ ಮಾಡಿದ್ದಾರೆ.

Similar News