×
Ad

ಈ ವಾರ

Update: 2023-02-05 10:10 IST

ಭಾರತ್ ಜೋಡೊ ಯಾತ್ರೆ ಮತ್ತು ರಾಹುಲ್ ನಗು

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಸಮಾರೋಪ ಕಾರ್ಯಕ್ರಮ ಕಾಶ್ಮೀರದ ಶ್ರೀನಗರದಲ್ಲಿ ನಡೆಯಿತು. ಸುರಿವ ಹಿಮವನ್ನು ಲೆಕ್ಕಿಸದೆ ಜನ ಸಮಾರೋಪದಲ್ಲಿ ಭಾಗಿಯಾಗಿದ್ದರು. ಗಮನ ಸೆಳೆದಿದ್ದು ರಾಹುಲ್ ಗಾಂಧಿ ಭಾಷಣ.

ಸೆಪ್ಟಂಬರ್ 7ರಂದು ತಮಿಳುನಾಡಿದ ಕನ್ಯಾಕುಮಾರಿಯಲ್ಲಿ ಭಾರತ್ ಜೋಡೊ ಯಾತ್ರೆ ಆರಂಭಗೊಂಡಿತ್ತು. 150 ದಿನಗಳ ಕಾಲ ಸುದೀರ್ಘ ನಡೆಯ ಮೂಲಕ 12 ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ 3,500 ಕಿ.ಮೀ. ಈ ಯಾತ್ರೆ ಸಾಗಿತ್ತು. ಕರ್ನಾಟಕದಲ್ಲೂ 21 ದಿನಗಳ ಕಾಲ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದಾರೆ. ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶ, ದಿಲ್ಲಿ, ಪಂಜಾಬ್ ಮೂಲಕ ಕೊನೆಗೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಈ ಯಾತ್ರೆ ಸಮಾರೋಪ ಆಗಿದೆ.

ಓರ್ವ ವ್ಯಕ್ತಿ ಹತ್ತಿರ ಹತ್ತಿರ ಅರ್ಧ ವರ್ಷ ದೇಶದ ತುಂಬಾ ಕಾಲ್ನಡಿಗೆ ಮಾಡುತ್ತಾರೆ, ಜನರ ಜೊತೆ ಬೆರೆಯುತ್ತಾರೆ ಎಂದರೆ ಅದು ಸುಮ್ಮನೆ ಮಾತಲ್ಲ. ಅದಕ್ಕೂ ದೈಹಿಕ, ಮಾನಸಿಕ ಸಿದ್ಧತೆ ಬೇಕು. ಯಾತ್ರೆಯುದ್ದಕ್ಕೂ ಕಂಡಿದ್ದು ರಾಹುಲ್ ನಗೆ. ಅವರು ಪಕ್ಷವನ್ನು ಮುನ್ನಡೆಸುತ್ತಾರೆಯೇ, ಕಾಂಗ್ರೆಸ್‌ಗೆ ಇದರಿಂದ ಲಾಭವಾಗುತ್ತದೆಯೇ, ಮುತ್ಸದ್ದಿ ರಾಜಕಾರಣಿ ಆಗುತ್ತಾರೆಯೇ ಎಂಬುದಕ್ಕಿಂತ ಹೆಚ್ಚಾಗಿ ಅವರೊಬ್ಬ ಅಪ್ಪಟ ಮಾನವೀಯ ಹೃದಯದ ಸರಳ ಹಾಗೂ ಅಷ್ಟೇ ಪ್ರಬುದ್ಧ ಮನುಷ್ಯ ಎಂಬುದಂತೂ ಈ ಯಾತ್ರೆಯಿಂದ ಗೊತ್ತಾಯಿತು. ಇನ್ನು ಇಷ್ಟು ನಡಿಗೆಯಲ್ಲಿ ಅವರಿಗೆ ಸಿಕ್ಕ ಅನುಭವ ಬಹಳ ದೊಡ್ಡದು.


ಈಗೇಕೆ ಬಂತು ಸಿ.ಡಿ.?

ಕಳೆದ ವಾರ ಆರಂಭವಾಗಿದ್ದ ಡಿಕೆಶಿ, ರಮೇಶ್ ಜಾರಕಿಹೊಳಿ ಸಿ.ಡಿ. ಫೈಟ್ ಈ ವಾರ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡಿದೆ. ಈ ವಾರ ರಮೇಶ್ ಜಾರಕಿಹೊಳಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದ್ದು ಎನ್ನಲಾದ 19 ಸೆಕೆಂಡ್‌ಗಳ ಆಡಿಯೋದಲ್ಲಿ ತಮ್ಮ ಆಸ್ತಿ ವಿಚಾರವಾಗಿ ಡಿಕೆಶಿ ಮಾತನಾಡಿದ್ದಾರೆ ಎನ್ನಲಾದ ವಿವರವಿದೆ.

ಇಷ್ಟು ಮಾತ್ರ ಅಲ್ಲ, ಇನ್ನೂ 20 ಆಡಿಯೋ ಇದೆ. ರಾಜಕೀಯ ಅಂತ್ಯ ಶುರುವಾಗಿದೆ ಎಂದು ಜಾರಕಿಹೊಳಿ ಹೇಳಿದರು. ತನ್ನನ್ನು ಷಡ್ಯಂತ್ರದಿಂದ ಸಿ.ಡಿ. ಕೇಸ್‌ನಲ್ಲಿ ಸಿಕ್ಕಿಸಲಾಗಿದೆ ಎಂದೂ ಹೇಳಿದ್ದಾರೆ. ಜಾರಕಿಹೊಳಿ ಸಿ.ಡಿ. ಪ್ರಕರಣ 2021 ಮಾರ್ಚ್‌ನಲ್ಲಿ ನಡೆದಿದ್ದು, ಪೊಲೀಸರು ಬಿ ರಿಪೋರ್ಟ್ ಹಾಕಿದ್ದೂ ಆಗಿದೆ. ಈಗ ಚುನಾವಣೆ ಹೊತ್ತಲ್ಲಿ ಇಷ್ಟು ಆಯಾಮ, ವೇಗ ಪಡೆಯಲು ಏನು ಕಾರಣ? ಚುನಾವಣೆ ಹೊತ್ತಲ್ಲಿ ಡಿಕೆಶಿಯನ್ನು ಕಟ್ಟಿ ಹಾಕುವ ತಂತ್ರವೆ?

ನ್ಯಾಯ ಗೆದ್ದಿತೆ?

28 ತಿಂಗಳ ಸುದೀರ್ಘ ಜೈಲುವಾಸದ ಬಳಿಕ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಿಡುಗಡೆಯಾಗಿದ್ದಾರೆ. 2020ರಲ್ಲಿ ಹಾಥರಸ್ ಅತ್ಯಾಚಾರ, ಕೊಲೆ ಪ್ರಕರಣದ ವರದಿಗೆ ತೆರಳಿದ್ದಾಗ ಕಪ್ಪನ್ ಬಂಧನ ಆಗಿತ್ತು. ಕಳೆದ ವರ್ಷದ ಸೆಪ್ಟಂಬರ್‌ನಲ್ಲೇ ಸುಪ್ರೀಂ ಕೋರ್ಟ್ ಬಿಡುಗಡೆಗೆ ಆದೇಶ ನೀಡಿದ್ದರೂ ಇಡಿಯ ಪ್ರಕರಣದಿಂದಾಗಿ ಇಷ್ಟು ದಿನ ಜೈಲಿನಲ್ಲೇ ಇರಬೇಕಾಯಿತು.

ನಮ್ಮ ಕಾನೂನು, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಕೊನೆಗೂ ಒಂದು ಭರವಸೆ ಉಳಿಯುವುದು ಇಂಥವು ನಡೆದಾಗಲೇ. ತಪ್ಪುಮಾಡದ, ಸಂಬಂಧವೇ ಇಲ್ಲದ ಅದೆಷ್ಟೋ ಮಂದಿ ಜೈಲಿನಲ್ಲಿದ್ದಾರೆ. ಕಪ್ಪನ್‌ಗೆ ಬೇಕಾದ ಕಾನೂನು ನೆರವು ಸಿಕ್ಕಿದೆ. ಆದರೆ ಅದ್ಯಾವುದೂ ಸಿಗದೆ  ಪಿತೂರಿ, ದ್ವೇಷ, ಷಡ್ಯಂತರಕ್ಕೆ ಬಲಿಯಾಗಿ ಇಡೀ ಜೀವನ ಜೈಲಿನಲ್ಲಿ ಕಳೆಯುವವರಿದ್ದಾರೆ. ಯುಎಪಿಎ ಅಡಿಯಲ್ಲಿ ಅದೆಷ್ಟೋ ಮಂದಿಯನ್ನು ಸರಕಾರ ಬಗ್ಗುಬಡಿದಿದೆ. ಅಂತಿಮವಾಗಿ ಗೆದ್ದಿದ್ದು ನ್ಯಾಯವಾ?

ಕಳಕಳಿಯಿಲ್ಲವೇ ಸರಕಾರಕ್ಕೆ?

ಅದಾನಿ ಗ್ರೂಪ್ ವಿರುದ್ಧದ ಹಿಂಡನ್‌ಬರ್ಗ್ ವರದಿ ವಿಚಾರವಾಗಿ ಸಂಸತ್ ಉಭಯ ಸದನಗಳಲ್ಲೂ ಕೋಲಾಹಲವೆದ್ದಿತು. ಅದಾನಿ ಗ್ರೂಪ್ ಮೇಲಿರುವ ಆರೋಪಗಳ ಮೇಲೆ ಜಂಟಿ ಸಂಸದೀಯ ಸಮಿತಿ ತನಿಖೆಗೂ ಪ್ರತಿಪಕ್ಷಗಳು ಒತ್ತಾಯಿಸಿದವು. ಈ ನಡುವೆ ಅದಾನಿ ಕಂಪೆನಿ ಶೇರುಮೌಲ್ಯ ಕುಸಿತ ತೀವ್ರ ಗತಿಯಲ್ಲಿ ಮುಂದುವರಿದಿದ್ದು, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 22ನೇ ಸ್ಥಾನಕ್ಕೆ ಅದಾನಿ ಕುಸಿದಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಎಸ್‌ಬಿಐ, ಎಲ್‌ಐಸಿಯಂಥ ಸಾರ್ವಜನಿಕ ವಲಯದ ಕಂಪೆನಿಗಳ ಹೂಡಿಕೆಗಳು ಕೂಡ ಇರುವುದರಿಂದ ತಲೆದೋರಿರುವ ಆತಂಕವನ್ನು ಬಗೆಹರಿಸುವ ಕಿಂಚಿತ್ ಇರಾದೆಯೂ ಸರಕಾರಕ್ಕೆ ಇದ್ದಂತಿಲ್ಲ.

ದೇಶದ ಮಧ್ಯಮ ವರ್ಗದವರ ದುಡ್ಡನ್ನೂ ಅದಾನಿ ಕಂಪೆನಿಯಲ್ಲಿ ಹೂಡಿಕೆ ಮಾಡಲು ಅವಕಾಶ ಕೊಟ್ಟ ಸರಕಾರಕ್ಕೆ ಈಗ ಅವರ ಆತಂಕಗಳ ಬಗ್ಗೆ ಏಕೆ ಕಳಕಳಿಯಿಲ್ಲ? ಅದಾನಿ ಹೇಗೋ ಬಚಾವಾಗುತ್ತಾರೆ. ಅದಾನಿಯಂಥವರನ್ನೇ ಸಾಕಲು ನಿಂತಿರುವ ಸರಕಾರಕ್ಕೆ ಬಡವರು ಮತ ಹಾಕಲು ಮಾತ್ರ ಬೇಕೆ ಎಂದು ಕೇಳಲೇಬೇಕಾಗಿರುವ ಸ್ಥಿತಿ ತಲೆದೋರಿದೆ.

ಬೆರಗಿನ ಸಾಧನೆ

ಐಸಿಸಿ ಆಯೋಜಿಸಿದ್ದ ಮೊದಲ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿದೆ. ಶೆಫಾಲಿ ವರ್ಮಾ ಅವರ ಭಾರತ ತಂಡ ಬಿರುಸಿನ ಆಟ ಪ್ರದರ್ಶಿಸಿ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆದ್ದಿದೆ. 2007ರಲ್ಲಿ, ಭಾರತ ತಂಡ ಐಸಿಸಿ ಟಿ 20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಗೆದ್ದಿತ್ತು.

ಅಲ್ಲಿಯೇ ಈಗ ಶೆಫಾಲಿ ಬಳಗ ಕೂಡ ಬೆರಗಿನ ಸಾಧನೆ ಮಾಡಿದಂತಾಗಿದೆ. ಶೆಫಾಲಿ ಹಾಗೂ ವಿಕೆಟ್ ಕೀಪರ್ ರಿಚಾ ಘೋಷ್ ಈಗಾಗಲೇ ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಸದಸ್ಯರಾಗಿದ್ದು, ಕೆಲವೇ ದಿನಗಳಲ್ಲಿ ಆರಂಭವಾಗುವ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ.

Similar News