ಅಮೆರಿಕ: ಹಳಿತಪ್ಪಿದ ರೈಲು, 50ಕ್ಕೂ ಅಧಿಕ ಬೋಗಿಗಳಿಗೆ ಬೆಂಕಿ

Update: 2023-02-05 18:01 GMT

ಓಹಿಯೋ,ಫೆ.5: ಅಮೆರಿಕದ ಓಹಿಯೋ ರಾಜ್ಯದ ಗ್ರಾಮವೊಂದರಲ್ಲಿ ಅಪಾಯಕಾರಿ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಸರಕು ಸಾಗಣೆಯ ರೈಲೊಂದು ಹಳಿತಪ್ಪಿದ್ದರಿಂದ ಹಲವು ಬೋಗಿಗಳು ಹೊತ್ತಿ ಉರಿದು, ಆಸುಪಾಸಿನ ನಿವಾಸಿಗಳನ್ನು ತೆರವುಗೊಳಿಸಲಾಗಿದೆ ಹಾಗೂ ಆ ಪ್ರದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಒಹಿಯೋ ರಾಜ್ಯದ ಗ್ರಾಮವಾದ ಈಸ್ಟ್ಪ್ಯಾಲೆಸ್ಟೀನ್ನಲ್ಲಿ ಶುಕ್ರವಾರ ರಾತ್ರಿ 9 ಗಂಟೆಯ ವೇಳೆಗೆ ಸರಕು ಸಾಗಣೆ ರೈಲಿನ ಸುಮಾರು 50 ಬೋಗಿಗಳು ಹಳಿತಪ್ಪಿದ್ದವು. ಅವು ಮ್ಯಾಡಿಸನ್, ಇಲಿನಾಯ್ಸಾನಿಂದ ಕೊನ್ವೇಗೆ ಅಪಾಯಕಾರಿ ವಸ್ತುಗಳು ಸೇರಿದಂತೆ ವೈವಿಧ್ಯಮಯ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದವು ಎಂದು ರೈಲು ನಿರ್ವಾಹಕ ನೊರ್ಫೋಲ್ಕ್ ಸೌದರ್ನ್ ಅವರು ಶನಿವಾರ ತಿಳಿಸಿದ್ದಾರೆ. ಆದರೆ ರೈಲು ಹಳಿತಪ್ಪಲು ಕಾರಣವೇನೆಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಆಸುಪಾಸಿನ ಯಾವುದೇ ಕಟ್ಟಡಗಳಿಗೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿಲ್ಲ. 

 ರೈಲಿನ 100 ಬೋಗಿಗಳ ಪೈಕಿ 20 ಬೋಗಿಗಳಲ್ಲಿ ಅಪಾಯಕಾರಿ ಸಾಮಗ್ರಿಗಳಿದ್ದವೆಂದು ಗುರುತಿಸಲಾಗಿದೆ. ಈ ಸರಕು ಸಾಗಣೆಯ ರೈಲು ದಹನಶೀಲ ವಸ್ತುಗಳು ಇಲ್ಲವೇ ಪರಿಸರಕ್ಕೆ ಹಾನಿಕರವಾದ ವಸ್ತುಗಳನ್ನು ಸಾಗಿಸುತ್ತಿದ್ದು ಯಾವುದೇ ರೀತಿಯ ಅಪಾಯವನ್ನು ಉಂಟುಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆಯೆಂದು ನೊರ್ಫೊಕ್ ಸೌದರ್ನ್ ತಿಳಿಸಿದ್ದಾರೆ. ರೈಲು ಹಳಿತಪ್ಪಿದ ಪ್ರದೇಶಗಳಲ್ಲಿ ಹಲವಾರು ಬೋಗಿಗಳು ಹೊತ್ತಿ ಉರಿಯುತ್ತಿವೆ ಎಂದು ಮೂಲಗಳು ತಿಳಿಸಿವೆ. ರೈಲು ಹಳಿತಪ್ಪಿದ ಘಟನೆಗೆ ಸಂಬಂಧಿಸಿ ತನಿಖಾ ತಂಡವೊಂದನ್ನು ರಚಿಸಿರುವುದಾಗಿ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಶನಿವಾರ ತಿಳಿಸಿದೆ. ಈಸ್ಟ್ ಪ್ಯಾಲೆಸ್ಟೀನ್ ಪಟ್ಟಣದಲ್ಲಿನ ರೈಲು ಹಳಿತಪ್ಪಿದ ಪ್ರದೇಶದ ಆಸುಪಾಸಿನ ಸುಮಾರು 2 ಸಾವಿರ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಪಟ್ಟಣದ ಮೇಯರ್ ಟ್ರೆಂಟ್ ಕೊನಾವೇ ತಿಳಿಸಿದ್ದಾರೆ.

Similar News