ಉಡುಪಿ | ಮನೆ ಕಳವು ಪ್ರಕರಣ: ಆರೋಪಿಗೆ 10ವರ್ಷ ಜೈಲುಶಿಕ್ಷೆ

Update: 2023-02-06 10:50 GMT

ಉಡುಪಿ, ಫೆ.6: ಒಂದು ವರ್ಷದ ಹಿಂದೆ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಉಡುಪಿ ನ್ಯಾಯಾಲಯ 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಜ.31ರಂದು ಆದೇಶ ನೀಡಿದೆ.

ಕುಕ್ಕೆಹಳ್ಳಿಯ ಕುಕ್ಕಿಕಟ್ಟೆ ನಿವಾಸಿ ಸುಖೇಶ್ ನಾಯ್ಕ(34) ಶಿಕ್ಷೆಗೆ ಗುರಿಯಾದ ಆರೋಪಿ. ಈತ 2021ರ ನ.17ರಂದು ಉಡುಪಿ ಗುಂಡಿಬೈಲು ದುಗ್ಗಣ್ಣಬೆಟ್ಟು ಮಾರ್ಗದ ಜುಮಾದಿಕಟ್ಟೆ ದೇವಸ್ಥಾನದ ಹಿಂಬದಿ ರಸ್ತೆಯಲ್ಲಿರುವ ಬಾಬು ಆಚಾರ್ಯರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಆಗಿನ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಉಡುಪಿ ಪ್ರಧಾನ ಸಿಜೆ ಮತ್ತು ಸಿಜೆಎಂ ನ್ಯಾಯಾಲಯ ನಡೆಸಿದ್ದು, ಸಾಕ್ಷ ಹಾಗೂ ಪೂರಕ ಸಾಕ್ಷ ಮತ್ತು ವಾದ ಪ್ರತಿವಾದವನ್ನು ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶೆ ಶಕುಂತಲಾ ಆರೋಪಿಗೆ ರಾತ್ರಿ ಮನೆಯ ಬೀಗ ಒಡೆದು ಕಳವು ಮಾಡಿದಕ್ಕೆ ಕಲಂ 380ರಡಿ 5ವರ್ಷ ಮತ್ತು ಕಲಂ 457ರಡಿ 5ವರ್ಷಗಳ ಕಾಲ ಕಠಿಣ ಸಜೆ ಮತ್ತು 5000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾಧಾರಣಾ ಶಿಕ್ಷೆಯನ್ನು ವಿಧಿಸಲಾಗಿದೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದಾರೆ.

Similar News