ನೀವು ಮುಸ್ಲಿಮರು, ಕ್ರೈಸ್ತರನ್ನು ಯಾವಾಗ ಕೊಲ್ಲುತ್ತೀರಿ?: ಹಿಂದುಗಳಿಗೆ ಧಾರ್ಮಿಕ ನಾಯಕನ ಪ್ರಶ್ನೆ

► ಕಾರ್ಯಕ್ರಮಗಳ ಕುರಿತು ವರದಿ ಮಾಡಿದ್ದ ಆನ್ಲೈನ್ ಪೋರ್ಟಲ್ 'Molitics'ಗೆ ಪೊಲೀಸ್ ನೋಟಿಸ್ ► ದ್ವೇಷಭಾಷಣ ಮಾಡಿದವರ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು

Update: 2023-02-06 15:44 GMT

ಹೊಸದಿಲ್ಲಿ: ಹಲವಾರು ಹಿಂದುತ್ವ ಗುಂಪುಗಳು ರವಿವಾರ ದಿಲ್ಲಿಯ ಜಂತರ್ ಮಂತರ್ ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮುಸ್ಲಿಮರು ಮತ್ತು ಕ್ರೈಸ್ತರನ್ನು ಕೊಲ್ಲುವಂತೆ ಕರೆಗಳನ್ನು ನೀಡಲು ಈ ಕಾರ್ಯಕ್ರಮಗಳು ಬಳಕೆಯಾಗಿವೆ. ಹಲವಾರು ವೇದಿಕೆಗಳಿಂದ ಭಾಷಣಕಾರರು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದರು ಎಂದು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದ ಹಲವರನ್ನು ಉಲ್ಲೇಖಿಸಿ scroll.in ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿರುವ ವೀಡಿಯೊಗಳಲ್ಲೊಂದರಲ್ಲಿ, ಓರ್ವ ಧಾರ್ಮಿಕ ನಾಯಕ ಮುಸ್ಲಿಮರು ಮತ್ತು ಕ್ರೈಸ್ತರನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಹಿಂದುಗಳಿಗೆ ಸೂಚಿಸಿದ್ದನ್ನು ಕಾಣಬಹುದು. ಇನ್ನೊಂದು ವೀಡಿಯೊದಲ್ಲಿ ಬಿಜೆಪಿ ನಾಯಕ ಸೂರಜಪಾಲ್ ಅಮು ಅವರು ಸುದರ್ಶನ ಟಿವಿಯ ಮುಖ್ಯ ಸಂಪಾದಕ ಸುರೇಶ್ ಚಾವಂಕೆಯನ್ನು ವಿರೋಧಿಸಲು ಲಾಬಿಯನ್ನು ರೂಪಿಸಿರುವವರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ.

ಬಾಗೇಶ್ವರ ಧಾಮದ ಧಾರ್ಮಿಕ ನಾಯಕ ಧೀರೇಂದ್ರ ಕೃಷ್ಣ ಶಾಸ್ತ್ರಿಯನ್ನು ಬೆಂಬಲಿಸಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಸರಿ ವಸ್ತ್ರಧಾರಿಯೋರ್ವರು, ‘ಒಡೆದು ಆಳಿ ಎಂದು ಬ್ರಿಟಿಷರು ಹೇಳಿದ್ದರು. ಒಡೆದು ಆಳಿ ಎಂದು ಕಾಂಗ್ರೆಸ್ ಹೇಳಿತ್ತು. ಕೈಸ್ತರೂ ಹಾಗೆಯೇ ಹೇಳಿದ್ದರು. ಕೊಲ್ಲಿ ಮತ್ತು ಆಳಿ ಎಂದು ಮುಸ್ಲಿಮರು ಹೇಳಿದ್ದರು. ನೀವು (ಹಿಂದುಗಳು) ಯಾವಾಗ ಕೊಲ್ಲುತ್ತೀರಿ? ನೀವೆಲ್ಲರೂ ಸತ್ತ ಬಳಿಕವೇ? ನೀವು ಅವರನ್ನು ಯಾವಾಗ ಕೊಲ್ಲುತ್ತೀರಿ? ನೀವು ಮುಸ್ಲಿಮರು ಮತ್ತು ಕ್ರೈಸ್ತರನ್ನು ಯಾವಾಗ ಕೊಲ್ಲುತ್ತೀರಿ’ ಎಂದು ಪ್ರಶ್ನಿಸಿದರು.

ತಮ್ಮ ಮನೆಗಳಲ್ಲಿ ಖಡ್ಗಗಳು ಮತ್ತು ಬಂದೂಕುಗಳನ್ನು ದಾಸ್ತಾನಿಟ್ಟುಕೊಳ್ಳುವಂತೆ ಹಿಂದುಗಳನ್ನು ಆಗ್ರಹಿಸಿದ ಅವರು, ‘ನಿಮ್ಮ ಒಂದು ಕೈಯಲ್ಲಿ ಶಸ್ತ್ರ ಮತ್ತು ಇನ್ನೊಂದು ಕೈಯಲ್ಲಿ ಶಾಸ್ತ್ರ (ಧರ್ಮಗ್ರಂಥ)ವಿರಲಿ. ನಮ್ಮ ಸಮುದಾಯ, ನಮ್ಮ ಧರ್ಮಗ್ರಂಥಗಳು, ನಮ್ಮ ತಾಯಂದಿರು ಮತ್ತು ಸೋದರಿಯರ ಮೇಲೆ ದಾಳಿ ನಡೆಸುವ ಯಾರನ್ನೇ ಆದರೂ ದೇಶದ್ರೋಹಿಗಳೆಂದು ನಿರ್ಧರಿಸಿ, ಅವರ ಮೇಲೆ ಗುಂಡು ಹಾರಿಸಿ, ನಡುರಸ್ತೆಗಳಲ್ಲಿಯೇ ಅವರನ್ನು ಕೊಲ್ಲಿ’ ಎಂದು ಹೇಳಿದರು.

ಶಾಸ್ತ್ರಿ ವ್ಯಾಪಕವಾಗಿ ಜನಪ್ರಿಯವಾಗಿರುವ ತನ್ನ ಯುಟ್ಯೂಬ್ ವಿಡಿಯೋಗಳ ಮೂಲಕ ಅಂಧಶ್ರದ್ಧೆ ಮತ್ತು ದ್ವೇಷಗಳನ್ನು ಹರಡುತ್ತಿದ್ದಾರೆ ಎಂಬ ಆರೋಪಗಳಿಂದಾಗಿ ಸುದ್ದಿಯಲ್ಲಿದ್ದಾರೆ.

ಹರ್ಯಾಣ ಬಿಜೆಪಿ ಘಟಕದ ಮಾಧ್ಯಮ ಸಂಯೋಜಕ ಮತ್ತು ಪ್ರಬಲ ಜಾತಿವಾದಿ ಗುಂಪು ಕರ್ಣಿಸೇನಾದ ಮುಖ್ಯಸ್ಥರಾಗಿರುವ ಅಮು ಚಾವಂಕೆಯವರ ಬೆಂಬಲಿಗರು ಭಾಗವಹಿಸಿದ್ದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಅತ್ಯಂತ ಪ್ರಚೋದಕ ಹೇಳಿಕೆಗಳನ್ನು ನೀಡಿದ್ದಾರೆ.

2021, ಡಿ. 19ರಂದು ದಿಲ್ಲಿಯಲ್ಲಿ ಹಿಂದು ಯುವವಾಹಿನಿಯ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಈಗಾಗಲೇ ಚಾವಂಕೆ ವಿರುದ್ಧ ತನಿಖೆ ನಡೆಯುತ್ತಿದೆ.

ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿ ಮಾಡಲು ಸಾಯುವಂತೆ ಅಥವಾ ಕೊಲ್ಲುವಂತೆ ಅವರು ಸಭಿಕರಿಗೆ ಶಪಥವನ್ನು ಬೋಧಿಸಿದ್ದರು. ಅಮು ರವಿವಾರ ಚಾವಂಕೆಯನ್ನು ಮತ್ತು ಹಿಂದು ರಾಷ್ಟ್ರ ಪರಿಕಲ್ಪನೆಯನ್ನು ವಿರೋಧಿಸುವವರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ.

ಸೋಮವಾರ ಮಧ್ಯಾಹ್ನದವರೆಗೆ ಈ ಕಾರ್ಯಕ್ರಮಗಳಲ್ಲಿ ದ್ವೇಷಭಾಷಣ ಮಾಡಿದವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿದ್ದು ವರದಿಯಾಗಿಲ್ಲ. ಆದರೆ ಕಾರ್ಯಕ್ರಮಗಳ ಕುರಿತು ವರದಿ ಮಾಡಿದ್ದ ಆನ್ಲೈನ್ ಪೋರ್ಟಲ್ ‘ಮಾಲಿಟಿಕ್ಸ್’ಗೆ ದಿಲ್ಲಿ ಪೊಲೀಸರು ನೋಟಿಸನ್ನು ಹೊರಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಾಲಿಟಿಕ್ಸ್ ನ ಸ್ಥಾಪಕ ಹಾಗೂ ನಿರ್ದೇಶಕ ಅನುದೀಪ ಜಗ್ಲಾನ್ ಅವರು,‘ನಾನು ಈಗಲೂ ಗೊಂದಲದಲ್ಲಿದ್ದೇನೆ, ನೀವು ನೋಟಿಸನ್ನು ನಮಗೆ ಕಳುಹಿಸಿದ್ದೇಕೆ? ಇಂತಹ ನೋಟಿಸ್ಗಳು ಕೇಸರಿ ವಸ್ತ್ರಧಾರಿ ಕ್ರಿಮಿನಲ್ಗಳಿಗೂ ಹೋಗಿರಬೇಕು ಎಂದು ನಾನು ಆಶಿಸಿದ್ದೇನೆ’ ಎಂದು ಟ್ವೀಟಿಸಿದ್ದಾರೆ.

Similar News