ನ್ಯಾಯಸಮ್ಮತ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲಾಗುತ್ತಿರುವ ಹೊತ್ತಿನಲ್ಲಿ...

Update: 2023-02-07 07:56 GMT

ಶರ್ಜೀಲ್ ಇಮಾಮ್, ಸಫೂರಾ ಝರ್ಗರ್, ಆಸಿಫ್ ಇಕ್ಬಾಲ್ ತನ್ಹಾ. ಈ ಹೆಸರುಗಳನ್ನು ಬಳಸಿಕೊಂಡು ಎಂತೆಂತಹ ಸಂಚಿನ, ಷಡ್ಯಂತ್ರದ, ಹಿಂಸೆಯ ಸೂತ್ರಧಾರಿಗಳು ಇವರು ಎಂಬ ಅಪಪ್ರಚಾರದ ಅಭಿಯಾನವೇ ಅದೆಷ್ಟೋ ದಿನಗಳ ಕಾಲ ನಿರಂತರ ಈ ದೇಶದಲ್ಲಿ ನಡೆದು ಹೋಯಿತು. ಈ ವಿದ್ಯಾರ್ಥಿ ನಾಯಕರನ್ನು ಭಯೋತ್ಪಾದಕರು, ಸಂಚುಕೋರರು ಎಂಬಂತೆ ಚಿತ್ರಿಸಲು ಟಿವಿ ನ್ಯೂಸ್ ಚಾನೆಲ್‌ಗಳು ಅದೆಷ್ಟು ಪಡಿಪಾಟಲು ಪಟ್ಟವು?

ಆದರೆ ಮೊನ್ನೆ ಇವರ ಬಗ್ಗೆಯೇ ದಿಲ್ಲಿಯ ನ್ಯಾಯಾಲಯವೊಂದು ತೀರ್ಪು ನೀಡಿತು. 2019ರ ದಿಲ್ಲಿಯ ಜಾಮಿಯಾ ವಿಶ್ವವಿದ್ಯಾನಿಲಯ ಬಳಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಶರ್ಜೀಲ್ ಇಮಾಮ್, ಸಫೂರಾ ಜರ್ಗರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ ಎಂಟು ಮಂದಿಯನ್ನು ದೋಷಮುಕ್ತರು ಎಂದು ದಿಲ್ಲಿಯ ನ್ಯಾಯಾಲಯ ಹೇಳಿತು. ಅವರು ಆ ಹಿಂಸೆಯಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಿರಲಿಲ್ಲ ಎಂಬುದು ಅತ್ಯಂತ ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

2019ರ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದಿತ್ತು. ಈಗ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಖುಲಾಸೆಗೊಳಿಸಿದ ಸಾಕೇತ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅರುಲ್ ವರ್ಮಾ, ಈ ಪ್ರಕರಣದಲ್ಲಿ ನಿಜವಾದ ಅಪರಾಧಿಗಳನ್ನು ಹಿಡಿಯದೆ, ಅಮಾಯಕರನ್ನು ಆರೋಪಿಗಳೆಂದು ಪೊಲೀಸರು ಬಲಿಪಶುಗಳನ್ನಾಗಿಸಿದ್ದಾರೆ ಎಂದಿದ್ದಾರೆ.

ಮೂರ್ನಾಲ್ಕು ವರ್ಷ ಜೈಲು ವಾಸ, ಹಿಂಸೆಯ ಸುಳ್ಳು ಆರೋಪದ ಕಳಂಕ ಹೊತ್ತವರಿಗೆ ನ್ಯಾಯಾಲಯ ಈ ಮೂಲಕ ಬಿಡುಗಡೆ ನೀಡಿದೆ. ದಿಲ್ಲಿ ಪೊಲೀಸರ ಬಣ್ಣ ಬಯಲಾಗಿದೆ.

ಸಫೂರಾ ಝರ್ಗರ್ ಅವರನ್ನು ಎಪ್ರಿಲ್ 10, 2020ರಲ್ಲಿ ಬಂಧಿಸಿದಾಗ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಮೊದಲು ಜಾಫ್ರಾಬಾದ್ ಮೆಟ್ರೊ ಸ್ಟೇಷನ್ ಬಳಿ ಟ್ರಾಫಿಕ್ ತಡೆದರು ಎಂದು ಸಫೂರಾ ಝರ್ಗರ್‌ರನ್ನು ಬಂಧಿಸಿದ್ದ ಪೊಲೀಸರು ಆಮೇಲೆ ಆಕೆಯ ಮೇಲೆ 50 ಜನರ ಸಾವಿಗೆ ಕಾರಣವಾದ ಗಲಭೆಗೆ ಷಡ್ಯಂತ್ರ ರೂಪಿಸಿದ್ದಾರೆ ಎಂದು ಯುಎಪಿಎ ಹಾಕಿ ಬಿಟ್ಟಿದ್ದರು. ಕೋವಿಡ್ ಕಾಲದಲ್ಲೇ ಗರ್ಭಿಣಿ ಸಫೂರಾ ಮೂರು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು. ಒಂದು ಪ್ರಕರಣದಲ್ಲಿ ಖುಲಾಸೆಯಾದರೂ, ಶರ್ಜೀಲ್ ಇಮಾಮ್ ವಿರುದ್ಧ 2020ರ ದಿಲ್ಲಿ ಹಿಂಸಾಚಾರ ಸಂಬಂಧಿತ ಯುಎಪಿಎ ಕಾಯ್ದೆಯ ಪ್ರಕರಣ ಬಾಕಿಯಿರುವುದರಿಂದ ಅವರು ಜೈಲಿನಲ್ಲೇ ಇರಬೇಕಾಗಿದೆ.

ಈಗ ಶರ್ಜೀಲ್ ಸಹಿತ 10 ಮಂದಿಯನ್ನು ಜಾಮಿಯಾ ಸಮೀಪದ ಹಿಂಸೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿರುವ ನ್ಯಾಯಾಧೀಶರಾದ ಅರುಲ್ ವರ್ಮಾ, ಭಿನ್ನಾಭಿಪ್ರಾಯವು ಮೂಲಭೂತ ಹಕ್ಕಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಸ್ತರಣೆಯಲ್ಲದೆ ಬೇರೇನೂ ಅಲ್ಲ  ಎಂದು ಹೇಳಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಕೆಲವರನ್ನು ಆರೋಪಿಗಳು ಎಂದು ಹೇಳಿ, ಮತ್ತೆ ಕೆಲವರನ್ನು ಸಾಕ್ಷ್ಯಗಳು ಎಂದು ತೋರಿಸಿರುವ ರೀತಿ ನ್ಯಾಯಸಮ್ಮತವಲ್ಲ ಎಂದೂ ಅವರು ಹೇಳಿದ್ದಾರೆ.

ಪ್ರಶ್ನಿಸುವುದನ್ನು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ದಮನಗೊಳಿಸಿದರೆ ಅದು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಈ ಎಲ್ಲ ಬೆಳವಣಿಗೆಯನ್ನು ನಾಶಗೊಳಿಸುತ್ತದೆ. ಈ ಅರ್ಥದಲ್ಲಿ, ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟವಾಗಿದೆ ಎಂಬ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮಾತನ್ನು ಇಲ್ಲಿ ನ್ಯಾ.ವರ್ಮಾ ಉಲ್ಲೇಖಿಸಿದ್ದಾರೆ.

ಪೊಲೀಸರ ಇಂತಹ ನಡೆಯು ನಾಗರಿಕರ ಸ್ವಾತಂತ್ರ್ಯಕ್ಕೆ ಹಾನಿಕಾರಕ. ಭಿನ್ನಾಭಿಪ್ರಾಯ ಮತ್ತು ಸಂಚಿನ ನಡುವಿನ ವ್ಯತ್ಯಾಸವನ್ನು ತನಿಖಾ ಸಂಸ್ಥೆಗಳು ಗ್ರಹಿಸುವುದು ಅಗತ್ಯ. ಸಂಚುಗಾರಿಕೆಯನ್ನು ಖಂಡಿತ ಹತ್ತಿಕ್ಕಬೇಕು. ಆದರೆ ಭಿನ್ನಮತ ವ್ಯಕ್ತಪಡಿಸುವವರಿಗೆ ಅವಕಾಶವಿರಬೇಕು. ಶಾಂತಿಯುತವಾಗಿ ಸೇರಿ ಪ್ರತಿಭಟಿಸುವ ನಾಗರಿಕರ ಹಕ್ಕನ್ನು ಪೊಲೀಸರು ಕಸಿಯಬಾರದು ಎಂದು ನ್ಯಾ.ವರ್ಮಾ ಹೇಳಿದ್ದಾರೆ.

ಪ್ರಸಕ್ತ ಪ್ರಕರಣದಲ್ಲಿ, ಪೊಲೀಸರು ಮೂರು ಪೂರಕ ಆರೋಪ ಪಟ್ಟಿಗಳನ್ನು ಸಲ್ಲಿಸಿರುವುದರಲ್ಲಿ ಅರ್ಥವೇ ಇಲ್ಲ. ಇಂತಹ ಕ್ರಮ ನಿಲ್ಲಬೇಕು. ಇದು ಕಾನೂನು ಕ್ರಮವನ್ನು ಮೀರಿದ್ದನ್ನು ತೋರಿಸುತ್ತದೆ ಮತ್ತು ಆರೋಪಿಗಳ ಹಕ್ಕುಗಳನ್ನು ತುಳಿಯುವಂಥದ್ದಾಗಿದೆ ಎಂದು ನ್ಯಾ.ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಊಹೆಗಳ ಆಧಾರದ ಮೇಲೆ ಖಂಡಿತ ಕಾನೂನು ಕ್ರಮಗಳನ್ನು ಜರುಗಿಸಲಾಗದು. ಸಂಭಾವ್ಯತೆಯನ್ನು ಕಲ್ಪಿಸಿಕೊಂಡು ಆರೋಪಪಟ್ಟಿ ಸಲ್ಲಿಸಲಾಗದು. ಆರೋಪಿಗಳನ್ನು ಹೀಗೆ ಸುದೀರ್ಘ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿಸುವುದು ದೇಶದ ಕಾನೂನು ವ್ಯವಸ್ಥೆಗೆ ಒಳ್ಳೆಯದಲ್ಲ ಎಂದೂ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳದಲ್ಲಿ ಹಲವಾರು ಪ್ರತಿಭಟನಾಕಾರರ ನಡುವೆ ಕೆಲವು ಸಮಾಜ ವಿರೋಧಿಗಳು ಹಿಂಸಾತ್ಮಕ ಬೆಳವಣಿಗೆಗೆ ಕಾರಣವಾಗುತ್ತಾರೆ. ಆದರೆ ಈ ಆರೋಪಿಗಳು ಖಂಡಿತ ಅಂತಹ ಸಂಚಿನ ಭಾಗವಲ್ಲ. ನಿಜವಾದ ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ ಎಂದು ಕೋರ್ಟ್ ಹೇಳಿದೆ.

ಇಂತಹ ಪ್ರಕರಣಗಳಲ್ಲಿ ಏನೆಲ್ಲಾ ಆಗಿಬಿಡಬಹುದು. ಪೊಲೀಸರು ನ್ಯಾಯಸಮ್ಮತ ರೀತಿಯಲ್ಲಿ ನಡೆದುಕೊಳ್ಳದೆ, ಆಳುವವರ ಮರ್ಜಿಗೆ ತಕ್ಕಂತೆ ವರ್ತಿಸಿದರೆ ಆಗಬಹುದಾದ ಅಪಾಯಗಳೇನು ಎಂಬುದನ್ನೇ ನ್ಯಾ.ವರ್ಮಾ ಮಾತುಗಳು ತಿಳಿಸುತ್ತಿವೆ.

ಉನ್ನತ ಶಿಕ್ಷಣ ಪಡೆದವರನ್ನು ಸರಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಬಂಧಿಸುವ, ನೇರವಾಗಿ ಹತ್ಯಾಕಾಂಡಕ್ಕೆ ಕರೆ ನೀಡುವವರನ್ನು, ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಪರೋಕ್ಷವಾಗಿ ಪ್ರೋತ್ಸಾಹಿಸುವ ಈ ದಿನಗಳಲ್ಲಿ ನ್ಯಾಯಮೂರ್ತಿ ಅರುಲ್ ವರ್ಮಾ ಅವರ ತೀರ್ಪು ಹಾಗೂ ಮಾತುಗಳು ಪ್ರತಿಯೊಬ್ಬ ಭಾರತೀಯನನ್ನು ಅದರಲ್ಲೂ ವಿಶೇಷವಾಗಿ ಪೊಲೀಸರನ್ನು ತಲುಪಬೇಕಿದೆ.

Similar News