ಅಂತಾರಾಷ್ಟ್ರೀಯ ಯುಪಿಐ ವಹಿವಾಟುಗಳಿಗೆ ಅನುಮತಿಸಿದ ಫೋನ್‌ಪೇ

Update: 2023-02-07 15:56 GMT

ಹೊಸದಿಲ್ಲಿ: ದೇಶದ ಯುಪಿಐ (UPI) ವಹಿವಾಟುಗಳಲ್ಲಿ ಗರಿಷ್ಠ ಪಾಲು ಹೊಂದಿರುವ ಫೋನ್‌ಪೇ ಈಗ ವಿದೇಶಗಳಲ್ಲಿ ಕೂಡ ಪಾವತಿಗಳನ್ನು ಸಕ್ರಿಯಗೊಳಿಸಿದೆ. ಭಾರತದ ಫಿನ್‌ಟೆಕ್‌ ವೇದಿಕೆಯೊಂದು ಇಂತಹ ಸವಲತ್ತನ್ನು ಹೊಂದಿರುವುದು ಇದೇ ಮೊದಲ ಬಾರಿ ಆಗಿದೆ. ವಿದೇಶಕ್ಕೆ ತೆರಳುವ ಭಾರತೀಯರು ಈಗ ಯುಪಿಐ ಬಳಸಿ ಅಲ್ಲಿ ಪಾವತಿ ಮಾಡಬಹುದಾಗಿದೆ.

ಈ ಸೌಲಭ್ಯದ ಅಡಿಯಲ್ಲಿ ಬಳಕೆದಾರನ ಬ್ಯಾಂಕ್‌ ಖಾತೆಯಿಂದ ವಿದೇಶಿ ಕರೆನ್ಸಿಯನ್ನು ಕಡಿತಗೊಳಿಸಲಾಗುವುದು ಹಾಗೂ ಅಂತಾರಾಷ್ಟ್ರೀಯ ಡೆಬಿಟ್‌ ಕಾರ್ಡ್‌ ವಹಿವಾಟಿನಂತೆಯೇ ಇದನ್ನು ಮಾಡಲಾಗುತ್ತದೆ. ಸ್ಥಳೀಯ ಕ್ಯೂಆರ್‌ ಕೋಡ್‌ ಹೊಂದಿರುವ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ,ಭೂತಾನದಲ್ಲಿನ ಎಲ್ಲಾ ಅಂತಾರಾಷ್ಟ್ರೀಯ ಮರ್ಚಂಟ್‌ ಔಟ್‌ಲೆಟ್‌ಗಳಲ್ಲಿ ಯುಪಿಐ ಬೆಂಬಲಿತವಾಗಿದೆ. ಇನ್ನೂ ಹಲವು ದೇಶಗಳಿಗೆ ಇದನ್ನು ವಿಸ್ತರಿಸುವ ನಿರೀಕ್ಷೆಯಿದೆ.

ಆಪ್‌ನಲ್ಲಿ ಯುಪಿಐ ಇಂಟರ್‌ನ್ಯಾಷನಲ್‌ಗಾಗಿ ಬ್ಯಾಂಕ್‌ ಖಾತೆಯನ್ನು ಸಕ್ರಿಯಗೊಳಿಸಬೇಕಿದೆ. ಇದನ್ನು ಆ ಸ್ಥಳದಲ್ಲಿ ಅಥವಾ ಬಳಕೆದಾರನ ಪ್ರವಾಸಕ್ಕಿಂತ ಮುನ್ನ ಮಾಡಬಹುದಾಗಿದೆ. ಇದರಿಂದ ಗ್ರಾಹಕರಿಗೆ ಭಾರತದ ಹೊರಗೆ ಪಾವತಿಗಳನ್ನು ಮಾಡಲು ಕ್ರೆಡಿಟ್‌ ಕಾರ್ಡ್‌ ಅಥವಾ ಫೋರೆಕ್ಸ್‌ ಕಾರ್ಡ್‌ ಬೇಕಾಗಿಲ್ಲ.

ಭಾರತದ ಯುಪಿಐ ಮಾರುಕಟ್ಟೆಯಲ್ಲಿ ಫೋನ್‌ಪೇ, ಗೂಗಲ್‌ ಪೇ, ಪೇಟಿಎಂ ಮತ್ತು ಕ್ರೆಡ್‌ ಪೇ ಶೇ 96.4 ಮಾರುಕಟ್ಟೆ ಪಾಲು ಹೊಂದಿವೆ. ಇವುಗಳ ಪೈಕಿ ಗರಿಷ್ಠ ಅಂದರೆ ಶೇ 49 ಪಾಲು ಫೋನ್‌ಪೇ ಹೊಂದಿದೆ.

Similar News