ಉಚ್ಚಿಲ: 11ರಂದು ಉಡುಪಿ ಜಿಲ್ಲಾ ರೈತ ಸಮ್ಮೇಳನ

Update: 2023-02-08 15:14 GMT

ಉಡುಪಿ: ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆಯುವ ಈ ಬಾರಿಯ ಉಡುಪಿ ಜಿಲ್ಲಾ ರೈತ ಸಮ್ಮೇಳನ ಫೆ.11 ಶನಿವಾರದಂದು ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಶ್ರೀಮತಿ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನಡೆಯಲಿದೆ ಎಂದು ಭಾಕಿಸಂನ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ನಿಟ್ಟೆ ತಿಳಿಸಿದ್ದಾರೆ.

ಉಡುಪಿಯ ಭಾಕಿಸಂ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ತನ್ನ 25 ವರ್ಷಗಳ ಅಸ್ತಿತ್ವದಲ್ಲಿ ಭಾಕಿಸಂ ನಡೆಸುತ್ತಿರುವ 12ನೇ ಜಿಲ್ಲಾ ಸಮ್ಮೇಳನ ಇದಾಗಿದೆ. ಸಮ್ಮೇಳನದಲ್ಲಿ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಬೇಡಿಕೆಗಳ ಕುರಿತು ವ್ಯಾಪಕ ಚರ್ಚೆ ನಡೆಯಲಿದೆ ಎಂದರು.

ಒಂದು ದಿನದ ಈ ಸಮ್ಮೇಳನವನ್ನು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್ ಬೆಳಗ್ಗೆ 10:00 ಗಂಟೆಗೆ ಉದ್ಘಾಟಿಸಲಿ ದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ವಹಿಸಲಿದ್ದಾರೆ ಎಂದರು.

ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಕೋಕರೆ, ಮಂಗಳೂರು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರೀತ ಶೆಟ್ಟಿ, ದಕ್ಷಿಣ ಕನ್ನಡದ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಚ್ಚಿಲ ಮಹಾಲಕ್ಷ್ಮೀ  ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಹಾಪ್‌ಕಾಮ್ಸ್‌ನ ಅಧ್ಯಕ್ಷ ಸೀತಾರಾಮ ಗಾಣಿಗ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಪೆರಂಪಳ್ಳಿ ಜಿ.ವಾಸುದೇವ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೃಷಿ ವಿಚಾರಗೋಷ್ಠಿಯಲ್ಲಿ ವಿವಿಧ ಕೃಷಿ ವಿಷಯಗಳ  ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಭಾಗವಹಿಸಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ವಿವಿಯ ವ್ಯವಸ್ಥಾಪಕ ಮಂಡಳಿಯ ಸದಸ್ಯ ಅರುಣ ಕುಮಾರ್ ವಹಿಸಲಿದ್ದಾರೆ.

ಅಪರಾಹ್ನ 2:30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಭಾಕಿಸಂ ರಾಜ್ಯ ಪದಾಧಿಕಾರಿ ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದರೆ, ಹಾಡ್ಯ ರಮೇಶರಾಜು ಸಮಾರೋಪ ಭಾಷಣ ಮಾಡಲಿದ್ದಾರೆ. ಒಟ್ಟು 24 ಅಂಶಗಳ ಬೇಡಿಕೆಯನ್ನೊಳಗೊಂಡ ಮನವಿಯನ್ನು ಸರಕಾರಕ್ಕೆ ನೀಡಲಾಗುವುದು ಎಂದು ನವೀನ್‌ಚಂದ್ರ ಜೈನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಿಲ್ಲಾ ಪದಾಧಿಕಾರಿಗಳಾದ ಸೀತಾರಾಮ ಗಾಣಿಗ, ಆಸ್ತೀಕ ಶಾಸ್ತ್ರೀ, ದೀಪಕ್ ಪೈ,  ಚಂದ್ರಹಾಸ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಶಾಂತ್ ಕುಮಾರ್, ಅನಂತ ಪದ್ಮನಾಭ ಉಡುಪ, ಮಹಿಳಾ ಪ್ರಮುಖರಾದ ನಿರ್ಮಲ ಉಪಸ್ಥಿತರಿದ್ದರು.

Similar News