ಸಾರ್ವಭೌಮತೆಯ ರಕ್ಷಣೆಗೆ ಬದ್ಧ ಚೀನಾಕ್ಕೆ ಸಂದೇಶ ರವಾನಿಸಿದ ಬೈಡನ್

Update: 2023-02-08 17:42 GMT

ವಾಷಿಂಗ್ಟನ್, ಫೆ.8: ಚೀನಾದೊಂದಿಗೆ ಸ್ಪರ್ಧೆಯ ವಿಷಯಕ್ಕೆ ಬಂದರೆ, ಅಮೆರಿಕದ ಸ್ಥಿತಿಯು ದಶಕಗಳ ಹಿಂದೆ ಇದ್ದ ರೀತಿಗಿಂತ ಈಗ ಉತ್ತಮವಾಗಿದೆ. ಆದರೆ ನಮ್ಮ ಸಾರ್ವಭೌಮತೆಗೆ ಅಪಾಯ ಎದುರಾದರೆ ನಾವೇನು ಮಾಡುತ್ತೇವೆ ಎಂಬುದನ್ನು ಚೀನಾದ ಬೇಹುಗಾರಿಕೆ ಬಲೂನನ್ನು ಹೊಡೆದುರುಳಿಸುವ ಮೂಲಕ ಕಳೆದ ವಾರ ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್(Joe Biden) ಹೇಳಿದ್ದಾರೆ.

ಪ್ರತೀ ವರ್ಷದಂತೆ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಬೈಡನ್, ಅಮೆರಿಕ ಸ್ಪರ್ಧೆಯನ್ನು ಎಂದಿಗೂ ಸ್ವಾಗತಿಸುತ್ತದೆ. ಆದರೆ ಸ್ಪರ್ಧೆಯು ಸಂಘರ್ಷದ ರೂಪ ತಳೆಯಬಾರದು ಎಂದರು. ಪ್ರಜಾಪ್ರಭುತ್ವಗಳು ಬಲಗೊಳ್ಳುತ್ತಿವೆ ಮತ್ತು ನಿರಂಕುಶ ಪ್ರಭುತ್ವಗಳು ದುರ್ಬಲಗೊಳ್ಳುತ್ತಿವೆ .  ಅಮೆರಿಕವು ಭವಿಷ್ಯದ ಉದ್ದಿಮೆ ಮತ್ತು ಮೈತ್ರಿಯಲ್ಲಿ ಹೂಡಿಕೆ ಮಾಡುತ್ತಿದೆ ಮತ್ತು ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕದ ಪಾಲುದಾರರ ಮಧ್ಯೆ ಸೇತುವೆ ರಚನೆಯಾಗುತ್ತಿದೆ. ಉಕ್ರೇನ್ ಯುದ್ಧ ಅಂತ್ಯಗೊಳ್ಳುವವರೆಗೂ ಇಡೀ ವಿಶ್ವವು ಉಕ್ರೇನ್ ಜತೆ ನಿಲ್ಲುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಗಿದೆ ಎಂದು ಬೈಡನ್  ಪ್ರತಿಪಾದಿಸಿದ್ದಾರೆ.

ದ್ವಿಪಕ್ಷೀಯತೆಯ ಅಗತ್ಯವನ್ನು ಪ್ರತಿಪಾದಿಸಿದ ಬೈಡನ್ `ಡೆಮೊಕ್ರಾಟರು ಮತ್ತು ರಿಪಬ್ಲಿಕನರು ಒಗ್ಗೂಡಿರುವುದು ಉತ್ತಮ ಸಂಕೇತವಾಗಿದೆ. ಬಲಿಷ್ಟ ಯುರೋಪ್‍ಗಾಗಿ ಇವರಿಬ್ಬರು ಒಗ್ಗೂಡಿದ್ದಾರೆ. ನಮ್ಮ ರಾಷ್ಟ್ರ ಮತ್ತು ಜನರ ಸಂಪರ್ಕಕ್ಕೆ ಸೇತುವೆಗಳನ್ನು ನಿರ್ಮಿಸಲು, ಒಂದು ತಲೆಮಾರಿನ ಮೂಲಸೌಕರ್ಯ ಕಾನೂನನ್ನು ತರಲು ಸಂಘಟಿತರಾಗಿದ್ದೇವೆ' ಎಂದರು. ತಮ್ಮ ಸರಕಾರದ ಆರ್ಥಿಕ ಸಾಧನೆಯನ್ನು ಸಮರ್ಥಿಸಿಕೊಂಡ ಅವರು, ಈ ಹಿಂದಿನ ಸರಕಾರ 4 ವರ್ಷಗಳಲ್ಲಿ ಮಾಡಿರದ ಸಾಧನೆಯನ್ನು ಆರ್ಥಿಕ ಕ್ಷೇತ್ರದಲ್ಲಿ ತಮ್ಮ ಸರಕಾರ ಎರಡೇ ವರ್ಷದಲ್ಲಿ ಮಾಡಿ ತೋರಿಸಿದೆ ಎಂದು ಹೇಳಿದರು. 

Similar News