ಟರ್ಕಿ, ಸಿರಿಯಾ ಭೂಕಂಪ: ಮೃತರ ಸಂಖ್ಯೆ 16,000ಕ್ಕೆ ಏರಿಕೆ

Update: 2023-02-09 08:14 GMT

ಟರ್ಕಿ: ಮೈಕೊರೆಯುವ ಚಳಿಯ ನಡುವೆಯೂ ಪರಿಹಾರ ತಂಡಗಳು ಭೂಕಂಪಪೀಡಿತ ಟರ್ಕಿ ಮತ್ತು ಸಿರಿಯಾದಲ್ಲಿ ಸಮರೋಪಾದಿ ಕಾರ್ಯಾಚರಣೆ ಮುಂದುವರಿಸಿದ್ದು, ನೆಲಸಮವಾಗಿರುವ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡವರ ರಕ್ಷಣೆಗೆ ಹರಸಾಹಸ ನಡೆಸಿದ್ದಾರೆ. ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ ಐದಂಕಿಯನ್ನು ದಾಟಿ 16,000ಕ್ಕೇರಿದೆ.

ಗಡಿಭಾಗದಲ್ಲಿ ಸಂಘರ್ಷದಿಂದ ಕಂಗೆಟ್ಟಿರುವ ಜನತೆಗೆ ಈ ಭೀಕರ ಪ್ರಕೃತಿ ವಿಕೋಪ ಮತ್ತಷ್ಟು ಸಂಕಷ್ಟ ತಂದಿದೆ. ಅವಶೇಷಗಳಿಗೆ ಬೆಂಕಿ ಹಾಕಿ ಸುಡುವ ಮೂಲಕ ಜನ ಬೆಚ್ಚನೆ ಉಳಿಯುವ ಪ್ರಯತ್ನದಲ್ಲಿದ್ದಾರೆ. ಏತನ್ಮಧ್ಯೆ ಅಂತರರಾಷ್ಟ್ರೀಯ ನೆರವಿನ ಮಹಾಪೂರ ಈ ವಿಕೋಪಪೀಡಿತ ಪ್ರದೇಶಗಳತ್ತ ಹರಿದು ಬರುತ್ತಿದೆ.

ಸಿರಿಯಾದಲ್ಲಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದ, ಸೋಮವಾರದ ಭೂಕಂಪದಲ್ಲಿ ಮೃತಪಟ್ಟ ತಾಯಿ ಜತೆಗಿನ ಕರಳುಬಳ್ಳಿಯನ್ನು ಇನ್ನೂ ಕಡಿದುಕೊಳ್ಳದ ನವಜಾತ ಶಿಶುವನ್ನು ಜೀವಂತವಾಗಿ ಹೊರಕ್ಕೆ ತಂದಿರುವುದು ಸೇರಿದಂತೆ ಹಲವು ವಿಸ್ಮಯಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. 

"ನಾವು ಅಗೆಯುತ್ತಿರುವಾಗ ಕ್ಷೀಣ ಧ್ವನಿ ಕೇಳಿಸಿತು" ಎಂದು ಖಲೀಲ್ ಅಲ್ ಸುವಾದಿ ಹೇಳಿದ್ದಾರೆ. ದೂಳು ಸ್ವಚ್ಛಗೊಳಿಸಿದಾಗ ಕರುಳಬಳ್ಳಿ ಹೊಂದಿದ್ದ ಮಗು ಪತ್ತೆಯಾಯಿತು. ಅದನ್ನು ಕತ್ತರಿಸಿ ಸಂಬಂಧಿಕರು ಆಸ್ಪತ್ರೆಗೆ ಸಾಗಿಸಿದರು ಎಂದು ಅವರು ವಿವರ ನೀಡಿದ್ದಾರೆ. ಇಡೀ ಕುಟುಂಬದಲ್ಲಿ ಉಳಿದ ಏಕೈಕ ಶಿಶು ಅದಾಗಿದೆ.

ಏತನ್ಮಧ್ಯೆ ಟರ್ಕಿಯ 10 ಆಗ್ನೇಯ ಪ್ರಾಂತ್ಯಗಳಲ್ಲಿ ಮುಂದಿನ ಮೂರು ತಿಂಗಳ ಅವಧಿಗೆ ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಘೋಷಿಸಿದ್ದಾರೆ.

Similar News