ಕುಂದಾಪುರ| ಉರುಳಿಗೆ ಸಿಲುಕಿ ಚಿರತೆ ಸಾವು
ಕುಂದಾಪುರ: ಮನೆ ಸಮೀಪದ ಜಾಗದ ಬೇಲಿಯ ಬಳಿಯಿಟ್ಟ ಉರುಳಿಗೆ ದೇಹದ ಭಾಗ ಸಿಲುಕಿದ್ದರಿಂದ ಚಿರತೆಯೊಂದು ನರಳಿ ಸಾವನ್ನಪ್ಪಿರುವ ಘಟನೆ ಅರಣ್ಯ ಇಲಾಖೆಯ ಬೈಂದೂರು ವಲಯದ ಕಾಲ್ತೋಡು ಯಡೇರಿ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
5-6 ವರ್ಷ ಪ್ರಾಯದ ಗಂಡು ಚಿರತೆ ಆಹಾರವರಸಿ ನಾಡಿಗೆ ಬಂದಿದ್ದು, ಇಲ್ಲಿನ ಮನೆಯೊಂದರ ಸಮೀಪದ ಬೇಲಿಯಲ್ಲಿ ಇಡಲಾದ ಉರುಳಿಗೆ ಸಿಲುಕಿ ಸತ್ತಿದೆ.
ಮೇಲ್ನೋಟಕ್ಕೆ ಕಾಡು ಹಂದಿ ಬೇಟೆಗಾಗಿ ಉರುಳು ಇಟ್ಟಿದ್ದು ಅದರಲ್ಲಿ ಚಿರತೆ ಸಿಲುಕಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಬೈಂದೂರು ವ್ಯಾಪ್ತಿಯಲ್ಲಿ ಅಕ್ರಮ ಬೇಟೆ ಹೆಚ್ಚಿದ್ದು ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂಬ ಆಗ್ರಹ ನಾಗರಿಕರಿಂದ ಕೇಳಿಬಂದಿದೆ.
ಪಶುವೈದ್ಯರು ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಎಸಿಎಫ್ ನೇತೃತ್ವದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.