×
Ad

'ಬಿ.ಸಿ.ರೋಡ್ ಕಲೋತ್ಸವ'ದಲ್ಲಿ ಜಯಂಟ್ ವೀಲ್ ದುರ್ಘಟನೆ ಸಂಭವಿಸಿಲ್ಲ: ವೈರಲ್ ವೀಡಿಯೊ ವಿರುದ್ಧ ದೂರು

Update: 2023-02-10 11:48 IST

 ಬಂಟ್ವಾಳ, ಫೆ.10: ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್ ಆಗಿರುವ ಜಯಂಟ್ ವೀಲ್(Gaint Wheel) ಅಪಘಾತದ ವೀಡಿಯೋ 'ಬಿ.ಸಿ.ರೋಡ್ ಕಲೋತ್ಸವ'ದಲ್ಲಿ ಸಂಭವಿಸಿದ್ದಲ್ಲ. ಈ ವೀಡಿಯೊ ಜೊತೆಗೆ 'ಇದು ಬಿ.ಸಿ.ರೋಡ್ ನಲ್ಲಿ ನಡೆದ ಘಟನೆ' ಎಂಬುದಾಗಿ ಮಹಿಳೆಯೊಬ್ಬಳ ವಾಯ್ಸ್ ಮೆಸೇಜ್ ಕೂಡಾ ಹರಿದಾಡುತ್ತಿದೆ. ಇವೆರಡರ ವಿರುದ್ಧ ಪೊಲೀಸ್ ದೂರು ನೀಡಲಾಗಿದೆ ಎಂದು ಚಿನ್ನದ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿ ತಿಳಿಸಿದ್ದಾರೆ.

4 ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಜಯಂಟ್ ವೀಲ್ ಅಪಘಾತಕ್ಕೀಡಾಗಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಇದರ ವೀಡಿಯೋವನ್ನು ಇದೀಗ ಬಿ.ಸಿ.ರೋಡಿನ ವೃತ್ತದ ಬಳಿಯ ಮೈದಾನದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕರಾವಳಿ ಕಲೋತ್ಸವದಲ್ಲಿ ಸಂಭವಿಸಿದ್ದೆಂದು ಬಿಂಬಿಸಿ ಅಪ ಪ್ರಚಾರ ಮಾಡಲಾಗುತ್ತಿದೆ. ಆದರೆ ಇಂತಹ ಯಾವುದೇ ಅವಘಡಗಳು ಕಲೋತ್ಸವದಲ್ಲಿ ಸಂಭವಿಸಿಲ್ಲ. ಈ ರೀತಿ ವದಂತಿ ಹರಡುತ್ತಿರುವವರ ವಿರುದ್ಧ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಲಾಗಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ‌ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದವರು ‌ಹೇಳಿದ್ದಾರೆ.     

ಕಲೋತ್ಸವ ಮುಂದೂಡಿಕೆ

ಈ ನಡುವೆ ಫೆ.8ರ ತನಕ ನಿಗದಿಯಾಗಿದ್ದ 'ಕಲೋತ್ಸವ'ವನ್ನು ಬಹುಜನರ ಅಪೇಕ್ಷೆ ಮೇರೆಗೆ ಫೆ.19ರ ತನಕ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಚಿನ್ನರ ಲೋಕ ಸೇವಾ ಬಂಧು ಉಪಾಧ್ಯಕ್ಷ ಇಬ್ರಾಹೀಂ ಕೈಲಾರ್ ತಿಳಿಸಿದ್ದಾರೆ.

ಫೆ.11ರಂದು ಸಂಜೆ ಚಿಣ್ಣರೋತ್ಸವ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಫೆ.19ರ ತನಕ ಪ್ರತಿದಿನ ಸಂಜೆ 7ರಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದವರು ತಿಳಿಸಿದ್ದಾರೆ.

Similar News