ಮಂಗಳೂರು: ಕಾರ್ಮಿಕರ ಪರ ಬಜೆಟ್ ಮಂಡನೆಗೆ ಆಗ್ರಹಿಸಿ CITU ಧರಣಿ
ಮಂಗಳೂರು, ಫೆ.10: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಬಜೆಟ್ ಜನವಿರೋಧಿ, ರೈತ ಕಾರ್ಮಿಕ ವಿರೋಧಿಯಾಗಿದೆ ಎಂದು ಆರೋಪಿಸಿ ಹಾಗೂ ಮುಂಬರುವ ರಾಜ್ಯ ಬಜೆಟ್ ಕಾರ್ಮಿಕರ ಪರವಾಗಿ ಮಂಡಿಸಲು ಆಗ್ರಹಿಸಿ ಇಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಧರಣಿಯ ಪ್ರಯುಕ್ತ ನಗರದ ಕ್ಲಾಕ್ ಟವರ್ ಬಳಿ CITU ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಕೇಂದ್ರದ ಬಜೆಟ್ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆ ಕೂಗಿದ ಧರಣಿನಿರತರು, ರಾಜ್ಯದ ಬಜೆಟ್ ರೈತ ಕಾರ್ಮಿಕರ ಪರವಾಗಿ ಮಂಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ. ಜಿಲ್ಲಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಬಣ್ಣಬಣ್ಣದ ಘೋಷಣೆಗಳ ಮೂಲಕ ದೇಶದ ಜನರನ್ನು ಮರಳುಗೊಳಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರ ಇಂದು ಜನಸಾಮಾನ್ಯರ, ರೈತ ಕಾರ್ಮಿಕರ ಹಿತಾಸಕ್ತಿಗಳನ್ನು ಕಡೆಗಣಿಸಿ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಧೃಢವಾಗಿ ನಿಂತಿದೆ ಎಂಬುದಕ್ಕೆ ಪ್ರಸಕ್ತ ಬಜೆಟ್ ಸೇರಿದಂತೆ ಸರಕಾರದ ಪ್ರತಿ ನಡೆ ಸಾಕ್ಷಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಅತ್ಯುತ್ತಮ ಬಜೆಟ್ ಎಂದು ಪುಂಗಿ ಊದಿದ ಕೇಂದ್ರ ಸರಕಾರದ ಬಜೆಟ್ ನ್ನು ಎಳೆಎಳೆಯಾಗಿ ಬಿಡಿಸಿದಾಗ ಎಷ್ಟೊಂದು ಜನ ವಿರೋಧಿಯಾಗಿದೆ ಎಂದು ತಿಳಿಯುತ್ತದೆ. ಶಿಕ್ಷಣ ಆರೋಗ್ಯ ಉದ್ಯೋಗ ಕೈಗಾರಿಕಾ ಕ್ಷೇತ್ರಗಳಿಗೆ ತೀರಾ ಕಡಿಮೆ ಅನುದಾನ ಮೀಸಲಿಟ್ಟು, ಬಂಡವಾಳಶಾಹಿಗಳಿಗೆ ಸಾಕಷ್ಟು ಹಣವನ್ನು ವ್ಯಯಿಸಲು ಮುಂದಾಗಿರುವ ನರೇಂದ್ರ ಮೋದಿ ಸರಕಾರ ಜನತೆಯ ಕೊಂಡುಕೊಳ್ಳುವ ಶಕ್ತಿಯನ್ನು ನಾಶಮಾಡಲು ಹೊರಟಿದೆ. ಡಬಲ್ ಇಂಜಿನ್ ಸರಕಾರವೆಂದು ಬೀಗುತ್ತಿರುವ ಬಿಜೆಪಿ ಮುಂಬರುವ ಬಜೆಟ್ ನಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
CITU ಜಿಲ್ಲಾ ನಾಯಕರಾದ ಸುಕುಮಾರ್ ಹಾಗೂ ಜಿಲ್ಲಾ ರೈತ ನಾಯಕರಾದ ಸದಾಶಿವ ದಾಸ್ ಮಾತನಾಡಿದರು.
ಧರಣಿಯ ನೇತೃತ್ವವನ್ನು CITU ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ನೋಣಯ್ಯ ಗೌಡ, ವಸಂತಿ ಕುಪ್ಪೆಪದವು, ರಾಧಾ ಮೂಡುಬಿದಿರೆ, ಗಿರಿಜಾ ವಹಿಸಿದ್ದರು.
CITU ಜಿಲ್ಲಾ ಮುಖಂಡರಾದ ಜಯಂತ್ ನಾಯ್ಕ್, ವಾರಿಜಾ, ಭವಾನಿ, ಅಶೋಕ್ ಶ್ರೀಯಾನ್, ಭಾರತಿ ಬೋಳಾರ, ಜಯಲಕ್ಷ್ಮಿ, ವಿಲ್ಲಿ ವಿಲ್ಸನ್, ಕೃಷ್ಣಪ್ಪ ಬೆಳುವಾಯಿ, ನಾಗೇಶ್ ಕೋಟ್ಯಾನ್, ಯುವಜನ ಮುಖಂಡರಾದ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ವಿದ್ಯಾರ್ಥಿ ನಾಯಕರಾದ ಮಾಧುರಿ ಬೋಳಾರ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.
ಬಳಿಕ CITU ನಿಯೋಗವು ದ.ಕ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ವಿವಿಧ ವಿಭಾಗದ ಕಾರ್ಮಿಕರ 30 ಬೇಡಿಕೆಗಳನ್ನು ಒಳಗೊಂಡ ಮನವಿ ಅರ್ಪಿಸಿತು.