ಇಂಡಿಯಾನ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರ ಉದ್ಘಾಟನೆ
ಕ್ಯಾನ್ಸರ್ ಗೆ ಸೂಕ್ತ ಚಿಕಿತ್ಸೆ ಲಭ್ಯ: ಡಾ. ಅಲಿ ಕುಂಬ್ಳೆ
ಮಂಗಳೂರು: ಆರಂಭಿಕ ಹಂತದಲ್ಲಿ ಪತ್ತೆಯಾದರೆ ಕ್ಯಾನ್ಸರ್ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಆದುದರಿಂದ ಈ ಬಗ್ಗೆ ಭಯ ಪಡಬೇಕಾಗಿಲ್ಲ ಎಂದು ಇಂಡಿಯಾನ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ತಿಳಿಸಿದ್ದಾರೆ.
ಅವರು ಇಂದು ಇಂಡಿಯಾನ ಆಸ್ಪತ್ರೆ ಯಲ್ಲಿ ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿಂದಿನ ಕಾಲದಲ್ಲಿ ಕ್ಯಾನ್ಸರ್ ಬಂದರೆ ಸಾವು, ಚಿಕಿತ್ಸೆ ಇಲ್ಲ ಎಂಬ ಹೆದರಿಕೆ ಇತ್ತು. ಈಗ ಮುಂಚಿತವಾಗಿ ಕ್ಯಾನ್ಸರ್ ಪತ್ತೆ ಮಾಡುವ ಸೌಲಭ್ಯವಿದೆ. ಇಂಡಿಯಾನ ಆಸ್ಪತ್ರೆಯಲ್ಲಿ ಈಗಾಗಲೇ ಇದ್ದ ಕ್ಯಾನ್ಸರ್ ಚಿಕಿತ್ಸೆಯ ವಿಭಾಗವನ್ನು ಸುಸಜ್ಜಿತವಾದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿ ಅಭಿವೃದ್ಧಿಪಡಿಸಿ ಸಮಗ್ರ ಚಿಕಿತ್ಸೆಗಳನ್ನು ಹಾಗೂ ತಜ್ಞರುಗಳನ್ನು ಒಳಗೊಂಡ ಕೇಂದ್ರಕ್ಕೆ ಅಧಿಕೃತವಾಗಿ ಇಂದು ಚಾಲನೆ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ತಜ್ಞರಾದ ಡಾ.ರಮಾನಾಥ ಶೆಣೈ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಾಗೂ ವಾಯು ಮಾಲಿನ್ಯ ವಾತವರಣದ ಕಾರಣದಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದೆ. ಆದುದರಿಂದ ಈಗ ಹೆಂಗಸರಲ್ಲಿ ಸ್ತನದ ಕ್ಯಾನ್ಸರ್ ಮತ್ತು ಗಂಡಸರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದೆ ಎಂದು ರಮಾನಾಥ ಶೆಣೈ ತಿಳಿಸಿದ್ದಾರೆ.
ಕಿಮೋಥೆರಪಿಯ ಅಡ್ಡ ಪರಿಣಾಮದಿಂದ ಕೂದಲು ಉದುರುತ್ತದೆ ಅಥವಾ ವಾಕರಿಕೆ ಇನ್ನಿತರ ಅನುಭವಗಳಾಗಬಹುದು. ಆದರೆ ಕ್ಯಾನ್ಸರ್ ಗುಣವಾದ ಬಳಿಕ ಮರಳಿ ಮೊದಲಿನಂತೆ ತಲೆಕೂದಲು ಚಿಕಿತ್ಸೆ ಪಡೆದ ವ್ಯಕ್ತಿ ಪಡೆದುಕೊಳ್ಳುತ್ತಾನೆ. ಆದುದರಿಂದ ಈ ಬಗ್ಗೆ ಚಿಂತೆ ಬೇಡ ಎಂದು ರಮಾನಾಥ ಶೆಣೈ ತಿಳಿಸಿದ್ದಾರೆ.
ಸಮಾರಂಭದಲ್ಲಿ ಡಾ.ಅಪೂರ್ವ ಮಾತನಾ ಡುತ್ತಾ,ಕ್ಯಾನ್ಸರ್ ಚಿಕಿತ್ಸೆಗೆ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಸಾಕಷ್ಟು ಮಿತ ದರದಲ್ಲಿ ಹಾಗೂ ಆಯುಶ್ಮಾನ್ ಭಾರತ್ ಹಾಗೂ ಮೆಡಿಸೆಪ್ ಯೋಜನೆಗಳ ಕಾರ್ಡ್ ಹೊಂದಿರುವ ರೋಗಿಗಳಿಗೆ ಆರ್ಥಿಕ ಹೊರೆಯಾಗದಂತೆ ಉಚಿತವಾಗಿಯೂ ಚಿಕಿತ್ಸೆ ನೀಡುವ ಸೌಲಭ್ಯ ಈ ಕೇಂದ್ರ ದಲ್ಲಿದೆ ಎಂದವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಡಾ.ಅಜಯ್ ಕುಮಾರ್, ಡಾ.ಆದಿತ್ಯ ಉಪಸ್ಥಿತರಿದ್ದರು. ಸಾಕ್ಷ ಕಾರ್ಯಕ್ರಮ ನಿರೂಪಿಸಿದರು.