×
Ad

ಪಾಕಿಸ್ತಾನ: ಪೆಟ್ರೋಲ್ ಕೊರತೆ ಜನಜೀವನ ಅಸ್ತವ್ಯಸ್ತ

Update: 2023-02-10 23:20 IST

ಇಸ್ಲಮಾಬಾದ್, ಫೆ.10: ತೀವ್ರ ಆರ್ಥಿಕ ಸಂಕಷ್ಟದ ಮಧ್ಯೆಯೇ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ತೈಲ ಕೊರತೆಯ ಕಾರಣ ಪಾಕಿಸ್ತಾನದ ಪಂಜಾಬ್ ವಲಯದಲ್ಲಿ ಬಹುತೇಕ ಪೆಟ್ರೋಲ್ ಪಂಪ್‌ಗಳು ಬಾಗಿಲು ಮುಚ್ಚಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ‘ಡಾನ್’ ವರದಿ ಮಾಡಿದೆ.

ದೂರದ ಸ್ಥಳಗಳಿಗೆ ಒಂದು ತಿಂಗಳಿಗಿಂತಲೂ ಅಧಿಕ ಸಮಯದಿಂದ ಪೆಟ್ರೋಲ್ ಸರಬರಾಜು ಸ್ಥಗಿತಗೊಂಡಿದ್ದು ಪರಿಸ್ಥಿತಿ ಭಯಾನಕವಾಗಿದೆ. ಅಕ್ರಮ ದಾಸ್ತಾನುದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಚ್ಚರಿಸಿದ ಹೊರತಾಗಿಯೂ ಪಂಜಾಬ್ ಪ್ರಾಂತದಲ್ಲಿ ಗ್ಯಾಸೊಲಿನ್ ಕೊರತೆ ತೀವ್ರಗೊಂಡಿದೆ.

ಇನ್ನೊಂದೆಡೆ, ಬೇಡಿಕೆಗೆ ಸಮವಾಗಿ ತೈಲ ಪೂರೈಕೆಯನ್ನು ಖಾತರಿಪಡಿಸಲು ತೈಲ ಮಾರ್ಕೆಟಿಂಗ್ ಸಂಸ್ಥೆ(ಒಎಂಸಿ)ಗಳು ವಿಫಲವಾಗಿರುವುದು ಈ ಸಮಸ್ಯೆಗೆ ಕಾರಣ ಎಂದು ಪಾಕಿಸ್ತಾನ ಪೆಟ್ರೋಲಿಯ ಡೀಲರ್‌ಗಳ ಸಂಘಟನೆ ದೂರಿದೆ. ಇದನ್ನು ನಿರಾಕರಿಸಿರುವ ಒಎಂಸಿ, ತೈಲ ಪೂರೈಕೆ ಸಮರ್ಪಕವಾಗಿದೆ. ಕೆಲವು ಪೆಟ್ರೋಲ್ ಪಂಪ್‌ಗಳು ಅಕ್ರಮ ದಾಸ್ತಾನು ಇರಿಸಿರುವುದು ಸಮಸ್ಯೆಗೆ ಕಾರಣ ಎಂದಿದೆ.

ಪಂಜಾಬ್‌ನ ಬಹುತೇಕ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲಾಗಿದ್ದರೆ, ಲಾಹೋರ್, ಗುಜ್ರಾನ್‌ವಾಲಾ ಮತ್ತು ಫೈಸಲಾಬಾದ್‌ನಲ್ಲಿ ಕಳೆದ ಕೆಲ ದಿನಗಳಿಂದ ಕಡಿಮೆ ಪ್ರಮಾಣದ ತೈಲ ಪೂರೈಕೆಯಿಂದ ಪೆಟ್ರೋಲ್ ಪಂಪ್‌ಗಳಲ್ಲಿ ತೈಲದ ಕೊರತೆ ಹೆಚ್ಚಿದೆ. ಹೆಚ್ಚಿನ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಲಾಗಿದ್ದರೆ, ಉಳಿದಿರುವ ಪೆಟ್ರೋಲ್ ಪಂಪ್‌ಗಳೂ ಬೇಡಿಕೆಯಷ್ಟು ಪೆಟ್ರೋಲ್ ಒದಗಿಸುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

Similar News