ಅಡ್ಯಾರ್| ಸ್ಕಿಡ್ಡಾಗಿ ಬಿದ್ದ ಬೈಕ್ ಸವಾರನ ಮೇಲೆ ಹರಿದ ವಾಹನ: ಸ್ಥಳದಲ್ಲೇ ಮೃತ್ಯು
Update: 2023-02-11 11:03 IST
ಮಂಗಳೂರು: ರಾ.ಹೆ.75ರ ಅಡ್ಯಾರ್ ಕಟ್ಟೆಯ ಬಳಿ ಶುಕ್ರವಾರ ರಾತ್ರಿ ಸ್ಕಿಡ್ಡಾಗಿ ಬಿದ್ದ ಬೈಕ್ ಸವಾರನ ಮೇಲೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಮೃತಪಟ್ಟ ಬೈಕ್ ಸವಾರನನ್ನು ವಿಟ್ಲ ಸಮೀಪದ ಮಾಣಿಲ ಗ್ರಾಮದ ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾನಿ ಮತ್ತು ಸುಧಾಮಣಿ ದಂಪತಿಯ ಪುತ್ರ ಕಾರ್ತಿಕ್ ಮಣಿಯಾನಿ (24) ಎಂದು ಗುರುತಿಸಲಾಗಿದೆ.
ನಗರದಲ್ಲಿ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಕಾರ್ತಿಕ್ ತನ್ನ ಮನೆಗೆ ತೆರಳುತ್ತಿದ್ದಾಗ ಶುಕ್ರವಾರ ರಾತ್ರಿ ಸುಮಾರು 9:55ಕ್ಕೆ ಅಡ್ಯಾರ್ ಕಟ್ಟೆಯ ಬಳಿ ಅಪಘಾತಕ್ಕೀಡಾದರು. ಕಾರ್ತಿಕ್ ಸವಾರಿ ಮಾಡುತ್ತಿದ್ದ ಬೈಕ್ ಸ್ಕಿಡ್ಡಾಗಿ ರೋಡ್ ಡಿವೈಡರ್‌ಗೆ ತಾಗಿ ಬಿದ್ದರು. ಅಷ್ಟರಲ್ಲಿ ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಯಾವುದೋ ಅಪರಿಚಿತ ವಾಹನವು ಹರಿದ ಪರಿಣಾಮ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.