ಉಡುಪಿ: ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ
ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಗೋಷ್ಟಿ ಉದ್ಘಾಟನೆಗೆ ಆಗಮಿಸಿದ ರೋಹಿತ್ ಚಕ್ರತೀರ್ಥ ವಿರುದ್ಧ ವಿವಿಧ ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ಇಂದು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಶ್ರೀನಾರಾಯಣಗುರುಗಳ ಹೆಸರು ಪಠ್ಯಪುಸ್ತಕದಿಂದ ಕೈಬಿಡುವ ಮೂಲಕ ಅಗೌರವ ತೋರಿರುವುದಾಗಿ ಆರೋಪಿಸಿ ವಿವಿಧ ಬಿಲ್ಲವ ಸಂಘಟನೆಯ ಮುಖಂಡರು, ಕುಂಜಿಬೆಟ್ಟು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಮ್ಮೇಳನದ ಮುಖ್ಯ ದ್ವಾರದ ಬಳಿ ಘೋಷಣೆಗಳನ್ನು ಕೂಗುತ್ತ ಸಮ್ಮೇಳನ ನಡೆಯುವ ಮೈದಾನದತ್ತ ಹೋಗಲು ಯತ್ನಿಸಿದರು.
ಆದರೆ ಮುಖ್ಯದ್ವಾರದ ಬಳಿ ಪೊಲೀಸರು ಪ್ರತಿಭಟನಕಾರರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ವಾಗ್ವಾದ ನಡೆಯಿತು. ರೋಹಿತ್ ಚಕ್ರತೀರ್ಥಗೆ ಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ ಪ್ರತಿಭಟನಕಾರರು ಗೋಬ್ಯಾಕ್ ರೋಹಿತ್ ಗೋಬ್ಯಾಕ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟಕರು ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡುವಂತೆ ಪ್ರತಿಭಟನಕಾರರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೆಜ್ಜೆಗಿರಿ ಮೇಳದ ಉಡುಪಿ ಜಿಲ್ಲಾ ಸಂಚಾಲಕ ನವೀನ್ ಅಮೀನ್, ಶ್ರೀನಾರಾಯಣಗುರುಗಳು ಬಿಲ್ಲವರಿಗೆ ಮಾತ್ರವಲ್ಲ ಇಡೀ ದೇಶದ ಎಲ್ಲ ಜನರಿಗೆ ಉತ್ತಮ ಸಂದೇಶ ಸಾರಿದ ಮಹಾನ್ ವ್ಯಕ್ತಿ. ಅಂತಹ ವ್ಯಕ್ತಿಯ ಸಂದೇಶವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಿದ ರೋಹಿತ್ ಚಕ್ರತೀರ್ಥನನ್ನು ಪ್ರತಿಭಟನೆ ಮೂಲಕ ಇಲ್ಲಿಂದ ಓಡಿಸುವ ಕೆಲಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಈ ವ್ಯಕ್ತಿ ಮುಂದೆ ಇನ್ನಷ್ಟು ಮಾರಕ ಬರಹ ಗಳನ್ನು ಪಠ್ಯಪುಸ್ತಕಗಳಲ್ಲಿ ತರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದ್ರೋಹಿ ರೋಹಿತ್ ಚಕ್ರತೀರ್ಥನನ್ನು ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣಕ್ಕೆ ಕರೆದು ಇವರು ಯಾವ ಸಂದೇಶ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ನಾವು ಯಕ್ಷಗಾನ ಸಮ್ಮೇಳನಕ್ಕೆ ನಮ್ಮ ವಿರೋಧ ಇಲ್ಲ. ನಾವು ಕೂಡ ಯಕ್ಷಗಾನದ ಅಭಿಮಾನಿಗಳು. ನಾವು ಆ ಒಬ್ಬ ವ್ಯಕ್ತಿಯನ್ನು ಮಾತ್ರ ವಿರೋಧಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿ ಅವರು ಭಾಷಣ ಮಾಡಬಾರದು. ಅಂತ ವ್ಯಕ್ತಿಯ ಭಾಷಣ ಕೇಳುವ ಅಗತ್ಯ ಉಡುಪಿಯವರಿಗೆ ಇಲ್ಲ ಎಂದು ಅವರು ಆರೋಪಿಸಿದರು.
ಉಡುಪಿ ಜಿಲ್ಲಾ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ದೇಶದಲ್ಲಿ ಶಾಂತಿ ನೆಲೆಸಲು ನಾಗಾರಯಣ ಗುರುಗಳ ತತ್ವ ಸಂದೇಶ ಯುವಕರಿಗೆ ಅತಿ ಅಗತ್ಯ. ಅಂತಹ ಸಂದೇಶವನ್ನು ಪಠ್ಯಪುಸ್ತಕದಿಂದ ತೆಗೆದ ಕ್ರೂರ ವ್ಯಕ್ತಿ ಚಕತ್ರತೀರ್ಥ. ಅಲ್ಲದೆ ನಾಡಗೀತೆಗೆ ಅಗೌರವ ಕೂಡ ತೋರಿದ್ದಾರೆ. ಯಕ್ಷಗಾನದ ಗಂಧಗಾಳಿ ಗೊತ್ತಿರದ ಚಕ್ರತೀರ್ಥನನ್ನು ದಿಕ್ಸೂಚಿ ಭಾಷಣಕ್ಕೆ ಕರೆದಿದ್ದಾರೆ. ಇದಕ್ಕೆ ಬಿಲ್ಲವ ಸಮಾಜದ ವಿರೋಧ ಇದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಉಡುಪಿ ಜಿಲ್ಲಾಧ್ಯಕ್ಷ ಸುನೀಲ್ ಬಂಗೇರ, ಬನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಬಿಲ್ಲವ ಯುವ ಮುಖಂಡ ದೀಪಕ್ ಕೋಟ್ಯಾನ್, ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಸಮ್ಮೇಳನದ ಮೈದಾನ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.