ಟರ್ಕಿಯಲ್ಲಿ 4.7 ತೀವ್ರತೆಯ ಮತ್ತೊಂದು ಭೂಕಂಪ: ಮೃತರ ಸಂಖ್ಯೆ 34,000ಕ್ಕೆ ಏರಿಕೆ

Update: 2023-02-13 10:53 GMT

ಇಸ್ತಾಂಬುಲ್: ಕಳೆದ ಸೋಮವಾರ 7.8 ತೀವ್ರತೆಯೊಂದಿಗೆ ಟರ್ಕಿ ಮತ್ತು ಸಿರಿಯಾ ದೇಶಗಳನ್ನು ನಡುಗಿಸಿದ್ದ ಭೂಕಂಪದ ನಂತರ ರವಿವಾರ 4.7 ತೀವ್ರತೆಯ ಮತ್ತೊಂದು ಭೂಕಂಪ ಟರ್ಕಿಯಲ್ಲಿ ಸಂಭವಿಸಿದೆ. ಸೋಮವಾರ ಸಂಭವಿಸಿದ ಭೂಕಂಪದಿಂದ ಭಾರಿ ಹಾನಿಗೊಳಗಾಗಿರುವ ನಗರಗಳ ಪೈಕಿ ಒಂದಾಗಿರುವ ಟರ್ಕಿಯ ದಕ್ಷಿಣ ನಗರವಾದ ಕಹ್ರಮನ್ಮರಾಸ್ ಭೂಕಂಪನದ ಕೇಂದ್ರ ಆಗಿತ್ತು ಎಂದು indiatoday.in ವರದಿ ಮಾಡಿದೆ.

ಈ ಕುರಿತು ವರದಿ ಮಾಡಿರುವ ಅಮೆರಿಕಾ ಭೌಗೋಳಿಕ ಸಮೀಕ್ಷಾ ಕೇಂದ್ರವು, "ಆಗ್ನೇಯ ಕಹ್ರಮನ್ಮರಾಸ್‌ನಿಂದ 24 ಕಿಮೀ ದೂರದಲ್ಲಿ ಬೆಳಗ್ಗೆ 3 ಗಂಟೆ ಸಮಯದಲ್ಲಿ, 37.390 ಡಿಗ್ರಿ ಉತ್ತರಕ್ಕೆ, 37.048 ಡಿಗ್ರಿ ಪೂರ್ವಕ್ಕೆ ಇರುವಂತೆ 15.7 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ" ಎಂದು ಹೇಳಿದೆ.

ರವಿವಾರ ಅವಶೇಷಗಳಡಿಯಿಂದ ಮತ್ತಷ್ಟು ಮಂದಿಯನ್ನು ರಕ್ಷಿಸಲಾಗಿದ್ದು, ಟರ್ಕಿ ಮತ್ತು ಸಿರಿಯಾವನ್ನು ಅಪ್ಪಳಿಸಿದ ಭಾರಿ ವಿನಾಶಕಾರಿ ಭೂಕಂಪದ ಒಂದು ವಾರದ ನಂತರ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. 

ಈ ದುರಂತದಲ್ಲಿ ಮತ್ತಷ್ಟು ಮಂದಿ ಉಳಿದಿರುವ ಸಾಧ್ಯತೆ ಕ್ಷೀಣಿಸಿದೆ. ಸೋಮವಾರ ಸಂಭವಿಸಿದ ಭೂಕಂಪ ಹಾಗೂ ಭೂಕಂಪದ ನಂತರದ ಕಂಪನಗಳಿಂದ ಈವರೆಗೆ 34,000 ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 1939ರ ನಂತರ ಟರ್ಕಿಯಲ್ಲಿ ಸಂಭವಿಸಿರುವ ಮಾರಣಾಂತಿಕ ಭೂಕಂಪ ಇದಾಗಿದೆ. ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ನಗರಗಳ ಪೈಕಿ ಒಂದಾದ ಅಂತಾಕ್ಯದಿಂದ ರವಿವಾರ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಲೂಟಿಕೋರರಿಂದ ರಕ್ಷಿಸಲು ಮಳಿಗೆಗಳಲ್ಲಿನ ಸಾಮಾನು ಸರಂಜಾಮುಗಳನ್ನು ತೆರವುಗೊಳಿಸಿದರು.

Similar News