ಎಜಿ ಪ್ರಮಾಣಪತ್ರದ ಕೊರತೆ ಜಿಎಸ್‌ಟಿ ಪರಿಹಾರ ವಿಳಂಬಕ್ಕೆ ಕಾರಣ:ವಿತ್ತ ಸಚಿವೆ

Update: 2023-02-13 15:16 GMT

ಹೊಸದಿಲ್ಲಿ,ಫೆ.13: ಅಕೌಂಟಂಟ್ ಜನರಲ್ (ಎಜಿ)ರ ದೃಢೀಕೃತ ಪ್ರಮಾಣಪತ್ರದ ಅಲಭ್ಯತೆಯಿಂದಾಗಿ ಕೆಲವು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗಿದೆ ಎಂದು ಸೋಮವಾರ ಸ್ಪಷ್ಟಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು,2017-18ರಿಂದ ಕೇರಳ ಒಂದೇ ಒಂದು ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂದು ಬೆಟ್ಟು ಮಾಡಿದರು.

2022,ಮೇ 31ರವರೆಗೆ ಎಲ್ಲ ರಾಜ್ಯಗಳಿಗೆ ಪಾವತಿಸಬೇಕಿದ್ದ 86,912 ಕೋ.ರೂ.ಜಿಎಸ್‌ಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ ಅವರು,ಪರಿಹಾರವನ್ನು ಸಮಿತಿಯು ಬಿಡುಗಡೆ ಮಾಡುತ್ತದೆ,ಕೇಂದ್ರವಲ್ಲ ಎಂದು ಒತ್ತಿ ಹೇಳಿದರು.

ಸಂಸತ್ತಿನಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೀತಾರಾಮನ್, ಕೇಂದ್ರ,ರಾಜ್ಯಗಳು ಮತ್ತು ಎಜಿ ನಡುವಿನ ಕಾನೂನಿಗನುಗುಣವಾಗಿ ಎಜಿ ಪ್ರಮಾಣೀಕರಣವು ಕಡ್ಡಾಯವಾಗಿದೆ ಮತ್ತು ಇದು ಒಪ್ಪಿತ ಪ್ರಕ್ರಿಯೆಯಾಗಿದೆ. ಅವುಗಳ ನಡುವೆ ಸಮಸ್ಯೆಯಿದ್ದರೆ ದೃಢೀಕೃತ ಪ್ರಮಾಣಪತ್ರವು ಕೇಂದ್ರವನ್ನು ತಲುಪುವುದು ವಿಳಂಬಗೊಳ್ಳುತ್ತದೆ ಎಂದು ತಿಳಿಸಿದರು.

ಎಜಿಯೊಂದಿಗೆ ವಿಷಯಗಳನ್ನು ಬಗೆಹರಿಸಿಕೊಳ್ಳಲು ರಾಜ್ಯಗಳು ಸ್ಪಲ್ಪ ಹೆಚ್ಚಿನ ದಕ್ಷತೆಯನ್ನು ಹೊಂದಿರಬೇಕು. ಕಾನೂನಿನಂತೆ ಎಜಿ ದೃಢೀಕೃತ ಪ್ರಮಾಣಪತ್ರವಿಲ್ಲದಿದ್ದರೆ ಪರಿಹಾರವನ್ನು ನೀಡಲಾಗುವುದಿಲ್ಲ ಎಂದ ಅವರು,ಎಜಿ ಪ್ರಮಾಣಪತ್ರವಿಲ್ಲದೆ,ಕೆಲವು ಮಿತಿಗಳನ್ನು ಮೀರಿ,ಮುಂದೆ ಸಾಗುವುದು ತನಗೆ ಕಷ್ಟವಾಗುತ್ತದೆ ಎಂದು ತಿಳಿಸಿದರು.

ಕೇರಳಕ್ಕೆ ತೀವ್ರ ತರಾಟೆ

ಕೇರಳ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡ ಸೀತಾರಾಮನ್, ಜಿಎಸ್‌ಟಿಯನ್ನು ಜಾರಿಗೊಳಿಸಿದಾಗಿನಿಂದ ರಾಜ್ಯ ಸರಕಾರವು ವಿತ್ತವರ್ಷ 2018ರಿಂದ 2021ರವರೆಗೆ ಒಂದೇ ಒಂದು ಎಜಿ ಪ್ರಮಾಣಪತ್ರವನ್ನು ಒದಗಿಸಿಲ್ಲ ಎಂದು ಹೇಳಿದರು.

ಎಜಿ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೂ ಕೇಂದ್ರ ಸರಕಾರವು ಪರಿಹಾರವನ್ನು ಬಿಡುಗಡೆ ಮಾಡುತ್ತಿಲ್ಲವೆಂದು ನಿರಂತರವಾಗಿ ಆರೋಪಿಸಲಾಗುತ್ತಿದೆ ಎಂದು ಹೇಳಿದ ಅವರು, ಅಗತ್ಯವಿರುವುದನ್ನು ಮಾಡಲು ಮತ್ತು ಪ್ರಮಾಣಪತ್ರವನ್ನು ಒದಗಿಸಲು ರಾಜ್ಯ ಸರಕಾರವನ್ನು ಕೋರುವಂತೆ ಪೂರಕ ಪ್ರಶ್ನೆಯನ್ನು ಕೇಳಿದ್ದ ಕೇರಳ ಸಂಸದ ಎನ್.ಕೆ.ಪ್ರೇಮಚಂದ್ರನ್ ಅವರಿಗೆ ಸೂಚಿಸಿದರು.

Similar News