×
Ad

ಕಾಸರಗೋಡು: ವಿದ್ಯುತ್ ತಂತಿಯ ಮೇಲೆ ಬಿದ್ದ ಮಸೀದಿ ಗೋಪುರ; ನೆಲಕಚ್ಚಿದ 10ಕ್ಕೂ ಅಧಿಕ ವಿದ್ಯುತ್ ಕಂಬಗಳು

►ರಾ.ಹೆದ್ದಾರಿ ಕಾಮಗಾರಿಗೆ ಕಟ್ಟಡ ತೆರವು ವೇಳೆ ಅವಘಡ ►ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

Update: 2023-02-14 22:06 IST

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮಸೀದಿ ಕಟ್ಟಡ ತೆರವುಗೊಳಿಸುತ್ತಿದ್ದಾಗ ಮಸೀದಿಯ ಗೋಪುರ ಏಕಾಏಕಿ ಕುಸಿದು ವಿದ್ಯುತ್ ತಂತಿಯ ಬಿದ್ದ ಘಟನೆ ನಗರ ಹೊರ ವಲಯದ ನುಳ್ಳಿಪ್ಪಾಡಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಇದರಿಂದ ಹಲವಾರು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ.

ಇಲ್ಲಿನ ರಸ್ತೆ ಬದಿಯಲ್ಲಿದ್ದ ಮಸೀದಿ ಕಟ್ಟಡವನ್ನು ಮಂಗಳವಾರ ಸಂಜೆ ಆರು ಗಂಟೆ ಸುಮಾರಿಗೆ ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಗುತ್ತಿತ್ತು. ಈ ವೇಳೆ ಕಟ್ಟಡದ ಮುಂಭಾಗ ಏಕಾಏಕಿ ಕುಸಿದ ಪರಿಣಾಮ ಎತ್ತರದ ಗೋಪುರ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ಹಲವಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಇದಲ್ಲದೆ ತೆರವು ಕಾರ್ಯ ನೋಡಲು ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಹೊಸ ಬಸ್ ನಿಲ್ದಾಣದಿಂದ ನುಳ್ಳಿಪ್ಪಾಡಿ ತನಕದ ಹೈಟೆನ್ಶನ್ ಸೇರಿದಂತೆ ಹತ್ತಕ್ಕೂ ಅಧಿಕ ಕಂಬಗಳು ನೆಲಕಚ್ಚಿವೆ. ನಗರದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ಘಟನೆ ಬಳಿಕ ಕಾಸರಗೋಡು-ಚೆರ್ಕಳ ನಡುವೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅಗ್ನಿಶಾಮಕ ದಳ, ಕೆಎಸ್‌ಇ ಬಿ ಅಧಿಕಾರಿಗಳು ಸ್ಥಳಕ್ಕೆ  ಆಗಮಿಸಿ ತೆರವು ಕಾರ್ಯ ನಡೆಸಿದ್ದು, ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Full View

Similar News