ದ.ಚೀನಾ ಸಮುದ್ರದಲ್ಲಿ ಫಿಲಿಫ್ಫೀನ್ಸ್ ತಟರಕ್ಷಣಾ ನೌಕೆಯ ಮೇಲೆ ಚೀನಿ ಪಡೆಗಳಿಂದ ಲೇಸರ್ ದಾಳಿ: ಮನಿಲಾ ಆರೋಪ

Update: 2023-02-14 17:45 GMT

ಮನಿಲಾ, ಫೆ.14: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ ತಟರಕ್ಷಣಾ ದಳದ ನೌಕೆಯನ್ನು ಗುರಿಯಿರಿಸಿ  ಚೀನಿ ತಟರಕ್ಷಣಾ ದಳದ ಹಡಗೊಂದು, ಮಿಲಿಟರಿ ದರ್ಜೆಯ ಲೇಸರ್ ಕಿರಣವನ್ನು ಹಾಯಿಸುವ ಮೂಲಕ  ನೌಕೆಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಕುರುಡುಗೊಳಿಸಿದೆ ಎಂದು ಫಿಲಿಪ್ಪೀನ್ಸ್ ಸೋಮವಾರ ಆರೋಪಿಸಿದೆ. ಚೀನಾದ ಈ ಕೃತ್ಯವು  ಮನಿಲಾದ ಸಾರ್ವಭೌಮತೆಯ ಹಕ್ಕುಗಳ ಮೇಲೆ ನಡೆಸಿದ ಘೋರ ಉಲ್ಲಂಘನೆಯೆಂದು ಅದು  ಆಕ್ರೋಶ ವ್ಯಕ್ತಪಡಿಸಿದೆ.

ಫಿಲಿಪ್ಫೀನ್ಸ್ ತಟರಕ್ಷಣಾ ದಳದ ಗಸ್ತು ನೌಕೆ ‘ಬಿಆರ್‌ಪಿ ಮಾಲಾಪಾಸ್ಕುವಾ’, ಫಿಲಿಪ್ಪೀನ್ಸ್ ಪಡೆಗಳ ಸ್ವಾಧೀನದಲ್ಲಿರುವ  ಸೆಕೆಂಡ್ ಥಾಮಸ್ ಶೋಲ್ ಎಂಬ ಮುಳುಗಡೆಯಾದ ಆಖಾತ ಪ್ರದೇಶವನ್ನು ಸಮೀಪಿಸುತ್ತಿದ್ದಾಗ ಚೀನಿ ಪಡೆಗಳು ಲೇಸರ್ ದಾಳಿ ನಡೆಸಿವೆ ಎಂದು ಫಿಲಿಫ್ಫೀನ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದರೆ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ವಾಂಗ್‌ವೆನ್‌ಬಿನ್ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಫೆಬ್ರವರಿ ಆರರಂದು  ಫಿಲಿಫ್ಪೀನ್ಸ್‌ನ ತಟರಕ್ಷಣಾ ದಳದ ನೌಕೆಯು  ಅನುಮತಿಯಿಲ್ಲದೆ ಚೀನಿ ಜಲಪ್ರದೇಶವನ್ನು  ಪ್ರವೇಶಿಸಿತ್ತು. ಆಗ ಚೀನಾದ  ತಟರಕ್ಷಣಾ ನೌಕೆಗಳು ‘‘ವೃತ್ತಿಪರತೆಯೊಂದಿಗೆ ಹಾಗೂ ಸಂಯಮದೊಂದಿಗೆ’’ ಪ್ರತಿಕ್ರಿಯಿಸಿದವು ಎಂದು ಹೇಳಿದ್ಥ್ದಾರೆ.

ಲೇಸರ್ ದಾಳಿಗೆ ಅಮೆರಿಕ ಖಂಡನೆ ಫಿಲಿಫ್ಫೀನ್ಸ್‌ನ ರಕ್ಷಣೆಗೆ ಬದ್ಧ: ನೆಡ್ ಪ್ರೈಸ್

ವಿವಾದಿತ ದಕ್ಷಿಣ ಚೀನಾ ಸಮುದ್ರಪ್ರದೇಶದಲ್ಲಿ ಫಿಲಿಪ್ಪೀನ್ಸ್ ಪಡೆಗಳ ಮೇಲೆ ಚೀನಿ ತಟರಕ್ಷಣಾ ದಳವು ಮಿಲಿಟರಿ ದರ್ಜೆಯ ಲೇಸರ್ ಕಿರಣಗಳಿಂದ ದಾಳಿ ನಡೆಸಿರುವುನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ.

ಅಮೆರಿಕದ ವಿದೇಶಾಂಗ ವಕ್ತಾರ ನೆಡ್ ಪ್ರೈಸ್, ಸೋಮವಾರ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ಚೀನಾದ   ನಡವಳಿಕೆಯು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ನೇರ ಬೆದರಿಕೆಯಾಗಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನಿನಡಿ ಖಾತರಿಪಡಿಸಲಾದ  ದಕ್ಷಿಣ ಚೀನಾ ಸಮುದ್ರದಲ್ಲಿನ ನೌಕಾಯಾನ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡಿದೆ ಹಾಗೂ ಕಾನೂನು ಆಧಾರಿತ ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ತೊಡೆದುಹಾಕಿದೆ’’ ಎಂದರು.
ಅಮೆರಿಕವು ನಮ್ಮ ಫಿಲಿಪ್ಪೀನ್ಸ್ ಮಿತ್ರರ ಪರವಾಗಿ ನಿಲ್ಲದೆ ಎಂದು ಪ್ರೈಸ್ ಅವರು ಹೇಳಿದ್ದಾರೆ.

‘‘ತಟರಕ್ಷಣಾ ದಳ ಸೇರಿದಂತೆ ಫಿಲಿಫ್ಫೀನ್ಸ್‌ನ  ಸಶಸ್ತ್ರಪಡೆಗಳು, ಸಾರ್ವಜನಿಕ ನೌಕೆಗಳು ಅಥವಾ ವಿಮಾನದ ಮೇಲೆ ನಡೆಯುವ ದಾಳಿಯು, 1951ರಲ್ಲಿ  ಅಮೆರಿಕ-ಫಿಲಿಫ್ಫೀನ್ಸ್ ನಡುವೆ ಏರ್ಪಟ್ಟ ರಕ್ಷಣಾ ಒಪ್ಪಂದದ ಬದ್ಧತೆಗಳ ಈಡೇರಿಕೆಗೆ ಕಾರಣವಾಗುತ್ತದೆ ಎಂದರು. ಈ ಒಡಂಬಡಿಕೆಯಡಿ ಬಾಹ್ಯ ದಾಳಿಯ ಸಂದರ್ಭಗಳಲ್ಲಿ ಎರಡೂ ರಾಷ್ಟ್ರಗಳುು ಪರಸ್ಪರ ರಕ್ಷಣೆಗೆ ನೆರವಾಗಬೇಕಾಗುತ್ತದೆ.

ದಕ್ಷಿಣ ಚೀನಾ ಸಮುದ್ರಪ್ರದೇಶದ ಮೇಲೆ ಚೀನಾ ಅಲ್ಲದೆ, ಫಿಲಿಪ್ಫೀನ್ಸ್, ವಿಯೆಟ್ನಾಮ್, ಮಲೇಶ್ಯ, ತೈವಾನ್ ಹಾಗೂ ಬ್ರೂನಿ ದೇಶಗಳು ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವೆ.  ಸಂಪನ್ಮೂಲಗಳಿಂದ ಸಮೃದ್ಧವಾದ ಹಾಗೂ ಅತ್ಯಂತ ನೌಕಾಸಂಚಾರ ದಟ್ಟಣೆಯ ಈ  ಸಾರಪ್ರದೇಶದಲ್ಲಿ ಜಗತ್ತಿನ ಅತಿ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಸಾಮಾಗ್ರಿಗಳು ಹಾಗೂ ತೈಲ ಸಾಗಾಟವಾಗುತ್ತಿದೆ.

Similar News