ಮಾನವೀಯತೆಯ ಪಾಠ ಕಲಿಸಿದ 9 ವರ್ಷದ ಬಾಲಕ!

ಬಿಂಬಗಳು

Update: 2023-02-15 07:28 GMT

ಆಧುನಿಕತೆಯ ಭರಾಟೆಯಲ್ಲಿ ಮಾನವೀಯತೆ ಮರೆಯಾಗುತ್ತಿರುವ ದಿನಮಾನಗಳಲ್ಲಿ ಭೂಕಂಪ ಸಂತ್ರಸ್ತರ ನೆರವಿಗೆ ಪಿಗ್ಗಿ ಬ್ಯಾಂಕ್ ಹಣವನ್ನು ಕೊಟ್ಟ ಬಾಲಕನ ಸೇವೆ ಮಾನವೀಯತೆಗೆ ಸಾಕ್ಷಿಯಾಗಿದೆ.

ಹೌದು, ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಲಕ್ಷಾಂತರ ಜನ ನೆಲೆ ಕಳೆದುಕೊಂಡು ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿರುವ ಟರ್ಕಿ ಹಾಗೂ ಸಿರಿಯಾಗೆ ಭಾರತ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಸೇವೆಗೆ ಮುಂದಾಗಿ ಸಂಕಷ್ಟಕ್ಕೆ ನೆರವು ನೀಡುವ ಮೂಲಕ ಅವರಿಗೆ ಶಕ್ತಿ ತುಂಬುವಂತಹ ಕೆಲಸ ಮಾಡುತ್ತಿವೆ.

ಇದರ ನಡುವೆ ಕಳೆದ ವರ್ಷ ನವೆಂಬರ್‌ನಲ್ಲಿ ಉಂಟಾದ ಭೂಕಂಪನದಲ್ಲಿ ಬದುಕುಳಿದ ಆಲ್ಪರ್ಸ್ಲಾನ್ ಎಫೆ ಡೆಮಿರ್ ಎಂಬ ಬಾಲಕ ಪಿಗ್ಗಿ ಬ್ಯಾಂಕ್‌ನಲ್ಲಿ ಉಳಿಸಿಟ್ಟ ಹಣವನ್ನು ಭೂಕಂಪನ ಸಂತಸ್ತರ ನೆರವಿಗೆ ನೀಡಿದ್ದಾನೆ. ಅಷ್ಟೇ ಅಲ್ಲದೆ ‘‘ನಾನು ಚಾಕಲೇಟ್ ಖರೀದಿಸದಿದ್ದರೂ ಪರವಾಗಿಲ್ಲ ಭೂಕಂಪವಾಗಿರುವ ಪ್ರದೇಶದಲ್ಲಿರುವ ಮಕ್ಕಳಿಗೆ ಚಳಿ, ಹಸಿವು ಇರಬಾರದು. ನನ್ನ ಬಟ್ಟೆ ಮತ್ತು ಆಟಿಕೆಗಳನ್ನು ಭೂಕಂಪವಾಗಿರುವ ಸ್ಥಳಕ್ಕೆ ಕಳುಹಿಸುತ್ತೇನೆ’’ ಎಂದು ಪತ್ರ ಬರೆದಿದ್ದಾನೆ ಸದ್ಯ ಡೆಮಿರ್ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ಮಾನವೀಯತೆ ಗುಣ ಕಂಡು ಎಲ್ಲರೂ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನುಷ್ಯನಿಗೆ ಮಾನವೀಯತೆ ಇದ್ದರೆ ಮಾತ್ರ ಅವನ ಬದುಕು ಸಾರ್ಥಕ ಪಡೆದುಕೊಳ್ಳಲು ಸಾಧ್ಯ ಎಂಬುದು ಪ್ರತಿಯೊಬ್ಬರೂ ಬಾಲಕ ಡೆಮಿರ್‌ನ ಸೇವೆಯಿಂದ ಅರ್ಥಮಾಡಿಕೊಳ್ಳಬೇಕಾಗಿದೆ. ಸೇವೆ, ಪ್ರೀತಿ, ಸೌಹಾರ್ದ, ಅಹಿಂಸೆ ಮತ್ತಿತರ ಸದ್ಗುಣಗಳೇ ಮಾನವೀಯ ಮೌಲ್ಯಗಳು.ಇವುಗಳನ್ನು ಅರಿತು ಆಚರಣೆ ತಂದಿದ್ದೇ ಆದರೆ ಆರೋಗ್ಯ ಪೂರ್ಣ ಸಮಾಜ ನಮ್ಮದಾಗುತ್ತದೆ. ಅದು ಡೆಮಿರ್ ಎಂಬ ಬಾಲಕನ ಸೇವೆಯಲ್ಲಿ ಕಾಣಬಹುದು. ಚಿಕ್ಕ ವಯಸ್ಸಿನಲ್ಲಿ  ಹಿರಿಯರು ನೀಡಿದ ಹಣ ಸಂಗ್ರಹಣೆ ಮಾಡಿ ಇನ್ನೊಬ್ಬರ ನೋವು ಅರ್ಥಮಾಡಿಕೊಂಡು ಸಹಾಯಕ್ಕೆ ಮುಂದಾಗಿದ್ದು ಶ್ಲಾಘನೀಯ ಕಾರ್ಯ.

ಸಂಕಷ್ಟದಲ್ಲಿ ಸಹಾಯ,ಸಹಕಾರಕ್ಕೆ ಮುಂದಾಗಬೇಕು ಎಂಬ ಉತ್ತಮವಾದ ಉದ್ದೇಶದಿಂದ ಭೂಕಂಪ ಸಂತ್ರಸ್ತರ ನೋವುಗಳನ್ನು ಅರ್ಥ ಮಾಡಿಕೊಂಡು 9 ವರ್ಷದ ಬಾಲಕ ಸೇವೆಗೆ ಮುಂದಾಗಿರುವುದು ಮಾದರಿ ಕಾರ್ಯ.

ಇತರರ ಕುರಿತು ಉತ್ತಮವಾದ ಅಭಿಪ್ರಾಯ ಹೊಂದಿ ಕಾಳಜಿಯ ಮನೋಭಾವ,ವಿನಯ,ನಮ್ರತೆಯನ್ನು ಅಳವಡಿಸಿಕೊಂಡು ಸಹಾಯ, ಸಹಕಾರಕ್ಕೆ ಮುಂದಾಗಿ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉತ್ತಮ ಸಂದೇಶವನ್ನು ನೀಡಿದ ಬಾಲಕನ ಸೇವೆ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಬೇಕು.

Similar News