×
Ad

ಕೋಟೇಶ್ವರದಿಂದ ಕೊಲ್ಲೂರು ದೇವಸ್ಥಾನಕ್ಕೆ ನೂತನ ಬ್ರಹ್ಮರಥ

Update: 2023-02-15 19:45 IST

ಕುಂದಾಪುರ: ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ವಿಶಿಷ್ಟ ಕಾಷ್ಠಶಿಲ್ಪ ಹೊಂದಿರುವ ಬ್ರಹ್ಮರಥದ ನಿರ್ಮಾಣ ಕಾರ್ಯಪೂರ್ಣಗೊಂಡಿದ್ದು, ಈ ರಥವು ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಫೆ.15ರಂದು ಕೊಲ್ಲೂರಿಗೆ ಹೊರಟಿದೆ.

ಅಂದಾಜು 400 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕೊಲ್ಲೂರು ದೇಗುಲದ ಬ್ರಹ್ಮರಥ ಶಿಥಿಲ ಸ್ಥಿತಿಯಲ್ಲಿ ಇತ್ತು. ದಿವಂಗತ ಆರ್.ಎನ್.ಶೆಟ್ಟಿ ಅವರ ಪುತ್ರ, ಉದ್ಯಮಿ ಸುನಿಲ್ ಆರ್. ಶೆಟ್ಟಿ ನೂತನ ಬ್ರಹ್ಮರಥವನ್ನು ನಿರ್ಮಿಸಿ ಕೊಡುವ ಪ್ರಸ್ತಾವ ಮುಂದಿಟ್ಟಾಗ ಆಡಳಿತ ಮಂಡಳಿ ಹಾಗೂ ಸರಕಾರದ ಒಪ್ಪಿಗೆಯ ಬಳಿಕ ವಾಸ್ತುತಜ್ಞ ಡಾ.ಮಹೇಶ್ ಮುನಿಯಂಗಳ ಅವರ ಉಸ್ತುವಾರಿ ಹಾಗೂ ಶಿಲ್ಪಿ ಕೆ.ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶ ನದಲ್ಲಿ ಕುಂದಾ ಪುರ ಸಮೀಪದ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನೂತನ ಬ್ರಹ್ಮರಥ ಸಿದ್ಧಪಡಿಸಲಾಗಿದೆ.

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ರಥವನ್ನು ಕೊಲ್ಲೂರು ಕ್ಷೇತ್ರಕ್ಕೆ ಒಯ್ಯಲಾಗುತ್ತಿದೆ. ರಥ ಸಾಗುವ ದಾರಿಯಲ್ಲಿರುವ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ಪುಷ್ಪಾರ್ಚನೆಗೆ ಅವಕಾಶ ಕಲ್ಪಿಸಲಾಗಿದೆ. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಆಕರ್ಷಕ ಬ್ರಹ್ಮರಥಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು.

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಸದಸ್ಯರಾದ ರಾಮಚಂದ್ರ ಅಡಿಗ, ಬೆಳ್ವೆ ಗಣೇಶ್ ಕಿಣಿ, ಡಾ.ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ಶೇಖರ್ ಪೂಜಾರಿ, ರತ್ನಾ ಕುಂದರ್, ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಪ್ರಮುಖರಾದ ಜಯಾನಂದ ಖಾರ್ವಿ, ಸುರೇಶ್ ಬೆಟ್ಟಿನ್, ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Similar News