2 ಲಕ್ಷ ಪಂಚಾಯತ್ ಗಳಲ್ಲಿ ಹೊಸ ಪ್ರಾಥಮಿಕ ಕೃಷಿ ಸಾಲ ಸೊಸೈಟಿ ಸ್ಥಾಪನೆಗೆ ಕೇಂದ್ರ ಸಂಪುಟ ಒಪ್ಪಿಗೆ

"ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನ"

Update: 2023-02-15 17:00 GMT

ಹೊಸದಿಲ್ಲಿ, ಫೆ. 15: ಎರಡು ಲಕ್ಷ ಪಂಚಾಯತ್ ಗಳಲ್ಲಿ ಹೊಸ ಪ್ರಾಥಮಿಕ ಕೃಷಿ ಸಾಲ ಸೊಸೈಟಿ ಸ್ಥಾಪಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ದೇಶದಲ್ಲಿ ಸಹಕಾರ ಚಳುವಳಿಯನ್ನು ಸಬಲಗೊಳಿಸಲು ಹಾಗೂ ಅದರ ವ್ಯಾಪ್ತಿಯನ್ನು ತಳಮಟ್ಟದ ವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಈ ಅನುಮತಿ  ನೀಡಿದೆ. 

ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ  ಮಾಹಿತಿ ನೀಡಿದ ಮಾಹಿತಿ ಹಾಗೂ ಪ್ರಸಾರ ಖಾತೆಯ ಸಚಿವ ಅನುರಾಗ್ ಠಾಕೂರ್(Anurag Thakur), ಆರಂಭದಲ್ಲಿ 2 ಲಕ್ಷ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಾಲ ಸೊಸೈಟಿ (PACS), ಕಾರ್ಯ ಸಾಧ್ಯವಾದ ಡೈರಿ ಸಹಕಾರಿ ಸೊಸೈಟಿ ಹಾಗೂ ಮೀನುಗಾರಿಕೆ ಸಹಕಾರಿ ಸೊಸೈಟಿಗಳನ್ನು ಈ ಸೌಲಭ್ಯ ಇಲ್ಲದ ಪಂಚಾಯತ್ ಗಳಲ್ಲಿ ಸ್ಥಾಪಿಸಲಾಗುವುದು.  ಈ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಾಲ ಸೊಸೈಟಿ (ಪಿಎಸಿಎಸ್), ಡೈರಿ ಸಹಕಾರಿ ಸೊಸೈಟಿ ಹಾಗೂ ಮೀನುಗಾರಿಕೆ ಸಹಕಾರಿ ಸೊಸೈಟಿಯನ್ನು ಮುಂದಿನ ಐದು ವರ್ಷಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಇದರಿಂದ  ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಹಾಗೂ ಆಧುನಿಕೀಕರಿಸಲು ಸಹಕಾರಿ ಸೊಸೈಟಿಗಳಿಗೆ ಸಾಧ್ಯವಾಗಲಿದೆ. ಇದು ಸಹಕಾರಿ ಕ್ಷೇತ್ರವನ್ನು ಸಬಲಗೊಳಿಸಲಿದೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಅವರು ಹೇಳಿದರು. 

4,800 ಕೋಟಿ ರೂಪಾಯಿ ಹಣಕಾಸು ಹಂಚಿಕೆಯೊಂದಿಗೆ 2022-23ರಿಂದ 2025-26ರ ವರೆಗಿನ ವಿತ್ತ ವರ್ಷಗಳಲ್ಲಿ ಕೇಂದ್ರ ಪ್ರಾಯೋಜಿತ ಅದ್ಭುತ ಗ್ರಾಮಗಳ ಯೋಜನೆಗೆ ಕೂಡ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಇದು ಉತ್ತರದ ಭೂ ಗಡಿಯಲ್ಲಿರುವ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜೀವನಾಧಾರದ ಅವಕಾಶಗಳಿಗೆ ಕಾರಣವಾಗಲಿದೆ. ಅಲ್ಲದೆ, ಜನರ ಜೀವನ ಗುಣಮಟ್ಟವನ್ನು ಸುಧಾರಿಸಲಿದೆ ಹಾಗೂ ಉತ್ತರ ಗಡಿಯಲ್ಲಿರುವ ಗ್ರಾಮಗಳನ್ನು ಒಳಗೊಂಡು ಪ್ರಗತಿಯತ್ತ ಸಾಗಲಿದೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. 

Similar News