ಕಾಬೂಲ್ ನ ಭಾರತ ದೂತಾವಾಸಕ್ಕೆ ಉಗ್ರರ ದಾಳಿ ಸಾಧ್ಯತೆ: ವಿಶ್ವಸಂಸ್ಥೆ ಎಚ್ಚರಿಕೆ
Update: 2023-02-15 22:57 IST
ವಿಶ್ವಸಂಸ್ಥೆ, ಫೆ.15: ಅಫ್ಘಾನಿಸ್ತಾನದ ಕಾಬೂಲ್(Kabul) ನಲ್ಲಿನ ಭಾರತ, ಚೀನ ಮತ್ತು ಇರಾನ್ ನ ರಾಯಭಾರಿ ಕಚೇರಿಗಳಿಗೆ ಐಸಿಸ್(Isis) ಉಗ್ರಸಂಘಟನೆಯ ದಾಳಿಯ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಎಚ್ಚರಿಸಲಾಗಿದೆ.
ಅಫ್ಘಾನ್ ನಲ್ಲಿ ಐಸಿಸ್ ಸಂಘಟನೆಯ ಕೃತ್ಯದ ಬಗ್ಗೆ ವಿಶ್ವಸಂಸ್ಥೆ(WHO)ಯ ಪ್ರಧಾನ ಕಾರ್ಯದರ್ಶಿ ಫೆಬ್ರವರಿ 1ರಂದು ನೀಡಿದ ವರದಿ ಹಾಗೂ ಫೆಬ್ರವರಿ 13ರಂದು ವಿಶ್ವಸಂಸ್ಥೆಯ ಮೇಲ್ವಿಚಾರಣಾ ತಂಡ ನೀಡಿದ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. 2022ರ ಜೂನ್ ಬಳಿಕ ಕಾಬೂಲ್ನ ದೂತಾವಾಸದಲ್ಲಿ ಭಾರತದ ಮಧ್ಯಮ ಹಂತದ ರಾಜತಾಂತ್ರಿಕರಿದ್ದು , ಈ ಕಚೇರಿಗೆ ಅರೆಸೇನಾ ಸಿಬಂದಿಯ ಭದ್ರತೆ ಒದಗಿಸಲಾಗಿದೆ.
ಕಾಬೂಲ್ ನಲ್ಲಿರುವ ಹಲವು ದೇಶಗಳ ರಾಯಭಾರಿ ಕಚೇರಿಗಳಿಗೆ ಐಸಿಸ್ ದಾಳಿಯ ಭೀತಿಯಿದೆ. ಆದರೆ ಮೇಲೆ ತಿಳಿಸಿದ ದೇಶಗಳಿಗೆ ದಾಳಿಯ ಸಾಧ್ಯತೆ ಅಧಿಕವಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಉಲ್ಲೇಖಿಸಿದೆ.