ವಿಶ್ವದಾದ್ಯಂತ ತಾಂತ್ರಿಕ ವೈಫಲ್ಯ: ಲುಫ್ತಾಂಸಾ ವಿಮಾನಸೇವೆಯಲ್ಲಿ ವ್ಯತ್ಯಯ
ಬರ್ಲಿನ್, ಫೆ.15: ಜರ್ಮನಿಯ ಲುಫ್ತಾಂಸಾ ವಿಮಾನಸಂಸ್ಥೆಯ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಕಂಡುಬಂದ ತಾಂತ್ರಿಕ ವೈಫಲ್ಯದಿಂದಾಗಿ ವಿಶ್ವದಾದ್ಯಂತ ಸಂಸ್ಥೆಯ ವಿಮಾನಸೇವೆಯಲ್ಲಿ ವ್ಯತ್ಯಯವಾಗಿದ್ದು ಸಾವಿರಾರು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಸಂಸ್ಥೆಯ ವಕ್ತಾರರನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿ ಸಂದರ್ಭ ಟೆಲಿಕಾಂ ಸಂಸ್ಥೆಯ ಫೈಬರ್ ಕೇಬಲ್‍ಗೆ ಹಾನಿಯಾಗಿರುವುದರಿಂದ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು ಹಲವು ವಿಮಾನಗಳ ಸಂಚಾರ ವಿಳಂಬವಾಗಿದ್ದು, ಕೆಲವು ರದ್ದಾಗಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲುಫ್ತಾಂಸದ ಎಲ್ಲಾ ವಿಮಾನಗಳೂ ಲ್ಯಾಂಡ್ ಆಗಿವೆ. ಪ್ರಯಾಣಿಕರ ಲಗೇಜ್‍ಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲು ಸಾಧ್ಯವಾಗದೆ ವಿಮಾನ ಪ್ರಯಾಣ ವಿಳಂಬಗೊಂಡು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಬ್ಲೂಮ್‍ಬರ್ಗ್ ವರದಿ ಮಾಡಿದೆ.
ತಾಂತ್ರಿಕ ಸಮಸ್ಯೆಯ ವರದಿ ಹೊರಬೀಳುತ್ತಿದ್ದಂತೆಯೇ ಲುಫ್ತಾಂಸಾ ಸಂಸ್ಥೆಯ ಶೇರುಗಳ ಮೌಲ್ಯ 1.5%ದಷ್ಟು ಕುಸಿದಿದೆ ಎಂದು ವರದಿಯಾಗಿದೆ.