ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೆ

Update: 2023-02-16 02:24 GMT

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ಭಾರಿ ತೆರಿಗೆ ಹೊರೆಯ ಮಿನಿ ಬಜೆಟ್ ಅನಾವರಣಗೊಳಿಸುತ್ತಿದ್ದಂತೆ ಬುಧವಾರ ರಾತ್ರಿ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ದರ ಐತಿಹಾಸಿಕ ಮಟ್ಟ ತಲುಪಿದೆ. ಕ್ರಿಟಿಕಲ್ ಲೋನ್ ಟ್ರೆಂಚ್ ನಿರ್ಬಂಧ ತೆಗೆದುಹಾಕುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮನವೊಲಿಸುವ ಯತ್ನದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 22.20 ರೂಪಾಯಿ ಹೆಚ್ಚಿ 272 ರೂಪಾಯಿ ತಲುಪಿದೆ ಎಂದು ಹಣಕಾಸು ಇಲಾಖೆಯ ಪ್ರಕಟಣೆ ಹೇಳಿದೆ. ಈ ಬೆಲೆ ಏರಿಕೆಗೂ ಡಾಲರ್‌ನ ವಿರುದ್ಧ ರೂಪಾಯಿ ಮೌಲ್ಯ ಕಳೆದುಕೊಂಡಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹೈಸ್ಪೀಡ್ ಡೀಸೆಲ್ ದರ ಲೀಟರ್‌ಗೆ 17.20 ರೂಪಾಯಿ ಹೆಚ್ಚಳವಾಗಿದ್ದು, 280 ರೂಪಾಯಿ ಆಗಿದೆ. ಸೀಮೆಎಣ್ಣೆ ದರ ಲೀಟರ್‌ಗೆ 12.90 ರೂಪಾಯಿ ಹೆಚ್ಚಿ 202.73 ರೂಪಾಯಿ ಆಗಿದೆ. ಲಘು ಡಿಸೆಲ್ ಆಯಿಲ್ 9.68 ರೂಪಾಯಿ ಬೆಲೆ ಎರಿಕೆ ಕಮಡಿದ್ದು, 196.68 ರೂಪಾಯಿ ಆಗಿದೆ. ಹೊಸ ಬೆಲೆ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಜಿಯೊ ನ್ಯೂಸ್ ವಿವರಿಸಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಐಎಂಎಫ್ ವಿಧಿಸಿರುವ ಪೂರ್ವಷರತ್ತಿನ ಪ್ರಮುಖ ಅಂಶವಾಗಿದೆ. ಈ ಬೆಲೆ ಏರಿಕೆ ಈಗಾಗಲೇ ಗಗನಮುಖಿಯಾಗಿರುವ ಹಣದುಬ್ಬರ ಮತ್ತಷ್ಟು ಹೆಚ್ಚಲು ಕಾರಣವಾಗಲಿದೆ. ಈ ಹೊಸ ವಿತ್ತೀಯ ಕ್ರಮಗಳನ್ನು ಮಿನಿ ಬಜೆಟ್ ಮೂಲಕ ಜಾರಿಗೆ ತರಲಾಗಿದೆ.

Similar News