ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆ
ಕುಂದಾಪುರ: ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ವಿಶಿಷ್ಟ ಕಾಷ್ಠಶಿಲ್ಪ ಹೊಂದಿರುವ ಬ್ರಹ್ಮರಥದ ಸಮರ್ಪಣೆಯು ಗುರುವಾರ ಸಂಭ್ರಮದಿಂದ ಜರುಗಿತು.
ಸುಮಾರು ೪೦೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕೊಲ್ಲೂರು ದೇಗುಲದ ಬ್ರಹ್ಮರಥ ಶಿಥಿಲ ಸ್ಥಿತಿಯಲ್ಲಿದ್ದು ದಿ.ಆರ್.ಎನ್.ಶೆಟ್ಟಿ ಅವರ ಪುತ್ರ, ಉದ್ಯಮಿ ಸುನಿಲ್ ಆರ್. ಶೆಟ್ಟಿ ನೂತನ ಬ್ರಹ್ಮರಥವನ್ನು ನಿರ್ಮಿಸಿ ಕೊಡುವ ಪ್ರಸ್ತಾವನೆ ಇಟ್ಟಿದ್ದು, ಆಡಳಿತ ಮಂಡಳಿ ಹಾಗೂ ಸರಕಾರದ ಒಪ್ಪಿಗೆಯ ಬಳಿಕ ವಾಸ್ತುತಜ್ಞ ಡಾ.ಮಹೇಶ್ ಮುನಿಯಂಗಳ ಅವರ ಉಸ್ತುವಾರಿ ಹಾಗೂ ಖ್ಯಾತ ರಥ ಶಿಲ್ಪಿ ಕೋಟೇಶ್ವರದ ಕೆ.ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಸಮೀಪದ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನೂತನ ಬ್ರಹ್ಮರಥವನ್ನು ಸಿದ್ಧಪಡಿಸಲಾಗಿತ್ತು.
ವಾಸ್ತು ತಜ್ಞರ ಹಾಗೂ ಶಿಲ್ಪಿಗಳ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಶಿಲ್ಪಿ ರಾಜಗೋಪಾಲ ಆಚಾರ್ಯ ಹಾಗೂ ಶಂಕರ ಆಚಾರ್ಯ ಅವರ ನೇತೃತ್ವದ ತಂಡ ಆಧುನಿಕ ತಂತ್ರಜ್ಞಾನದೊಂದಿಗೆ, ವಿಶೇಷ ಉಪಕರಣಗಳ ಮೂಲಕ ರಥವನ್ನು ಸ್ವಚ್ಚಗೊಳಿಸಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಸಿಎನ್ಸಿ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಿ ಹಳೆಯ ರಥದಲ್ಲಿನ ಮೂರ್ತಿ ಹಾಗೂ ಕೆತ್ತನೆಗಳ ಚಿತ್ರಣ ಸೆರೆ ಹಿಡಿಯಲಾಯಿತು. ವಿನ್ಯಾಸ ಹಾಗೂ ಕಾಷ್ಠಶಿಲ್ಪಗಳ ರಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆಯ ರಥದ ಪಡಿಯಚ್ಚಿನಂತೆ ಹೊಸ ಬ್ರಹ್ಮರಥವನ್ನು ಕುಂಭಾಸಿಯಲ್ಲಿ ತಯಾರಿಸಲಾಗಿತ್ತು.
ಬ್ರಹ್ಮರಥ ಸಮರ್ಪಣೆ: ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಫೆ.೧೫ ಬುಧವಾರ ಮೆರವಣಿಗೆಯ ಮೂಲಕ ರಥವನ್ನು ಕೊಲ್ಲೂರು ಕ್ಷೇತ್ರಕ್ಕೆ ರಾತ್ರಿ ವೇಳೆ ತಂದಿದ್ದು ಗುರುವಾರ ಬೆಳಗಿನಿಂದ ಧಾರ್ಮಿಕ ಕಾರ್ಯಕ್ರಮ ಜರುಗಿ, ಪೂಜಾ ವಿಧಿವಿಧಾನಗಳು ನಡೆದ ಬಳಿಕ ಇಂದು ಮಧ್ಯಾಹ್ನದ ವೇಳೆಗೆ ರಥವನ್ನು ದೇವಿಗೆ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ, ರಥದ ದಾನಿ ಹಾಗೂ ಉದ್ಯಮಿ ಸುನಿಲ್ ಆರ್. ಶೆಟ್ಟಿ ಮತ್ತು ಕುಟುಂಬಸ್ಥರು, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಗ್ರಾಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ.ಕೆ.ರಾಮಚಂದ್ರ ಅಡಿಗ, ಬೆಳ್ವೆ ಗಣೇಶ್ ಕಿಣಿ, ಡಾ.ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ಶೇಖರ ಪೂಜಾರಿ, ರತ್ನಾ ಆರ್ ಕುಂದರ್, ಮಂದರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್, ವಾಸ್ತುತಜ್ಞ ಡಾ.ಮಹೇಶ್ ಮುನಿಯಂಗಳ, ರಥಶಿಲ್ಪಿಗಳಾದ ಕೆ.ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.