ಕಾರ್ಕಳ ಜ್ಯುವೆಲ್ಲರಿ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
ಉಡುಪಿ, ಫೆ.17: ಹತ್ತು ವರ್ಷಗಳ ಹಿಂದೆ ಕಾರ್ಕಳದಲ್ಲಿ ನಡೆದ ಜ್ಯುವೆಲ್ಲರಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ಏಳು ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರ್ಕಳ ಸಂಚಾರಿ ನ್ಯಾಯಾಲಯ ಫೆ.14ರಂದು ಆದೇಶ ನೀಡಿದೆ.
ಕಾರ್ಕಳ ವರಂಗ ಬಂಡಿಮಠ ನಿವಾಸಿ ಮಧುಕರ ಆಚಾರ್ಯ(36) ಹಾಗೂ ಕುಂದಾಪುರ ಕುಂಭಾಸಿಯ ಪ್ರಶಾಂತ್ ಆಚಾರ್ಯ(36) ಶಿಕ್ಷೆಗೆ ಗುರಿಯಾದ ಆರೋಪಿಗಳು.
ಉಳಿದ ಇಬ್ಬರು ಆರೋಪಿಗಳಾದ ಕುಂದಾಪುರ ದೂಪದ ಕಟ್ಟೆಯ ಶಾಹಿದ್ ಅಲಿ ಮತ್ತು ಕೋಣಿಯ ಚಂದ್ರ ಆಚಾರ್ಯ ಅವರನ್ನು ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳಿಸಿದೆ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಂಪಾರುವಿನ ಮೋಹನ್ ಮೊಗವೀರ ಮತ್ತು ಆನೆಗಳ್ಳಿಯ ಸಂದೀಪ್ ಮೊಗವೀರ ವಿಚಾರಣಾವಧಿಯಲ್ಲಿ ಮೃತ ಪಟ್ಟಿದ್ದಾರೆ.
2013ರ ಸೆ.17ರಂದು ರಾತ್ರಿ ವೇಳೆ ರಾಮಚಂದ್ರ ಮಾನೆ ಎಂಬವರ ಕಾರ್ಕಳ ದಲ್ಲಿರುವ ಲಕ್ಷ್ಮೀಗೋಲ್ಡ್ ವರ್ಕ್ಸ್ ಜ್ಯುವೆಲ್ಲರಿ ಅಂಗಡಿಗೆ ಆರು ಮಂದಿ ಆರೋಪಿಗಳ ಪೈಕಿ ಇಬ್ಬರು ನುಗ್ಗಿ, ಮಾಲಕರ ಕಣ್ಣಿಗೆ ಖಾರದ ಪುಡಿ ಎರಚಿ, 42.67ಲಕ್ಷ ರೂ. ಮೌಲ್ಯದ 1500ಗ್ರಾಮ್ ಚಿನ್ನಾಭರಣಗಳನ್ನು ದರೋಡೆಗೈದು ಕಾರಿನಲ್ಲಿ ಪರಾರಿಯಾಗಿದ್ದರು. ಅಲ್ಲಿಂದ ಹೊರಟ ಕಾರನ್ನು ಖಚಿತ ಮಾಹಿತಿ ಯಂತೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಡೆದಿದ್ದು, ಈ ವೇಳೆ ಮಧುಕರ ಆಚಾರ್ಯ ಹೊರತು ಪಡಿಸಿ ಉಳಿದ ಐದು ಮಂದಿ ಆರೋಪಿಗಳು ಕಾರಿನಿಂದ ಇಳಿದು ಪರಾರಿಯಾಗಿದ್ದರು.
ಮುಂದೆ ತನಿಖೆ ವೇಳೆ ಉಳಿದ ಆರೋಪಿಗಳನ್ನು ಬಂಧಿಸಿ ಎಲ್ಲ ಚಿನ್ನಾಭರಣ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತನಿಖೆ ನಡೆಸಿದ ಆಗಿನ ಕಾರ್ಕಳದ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 35 ಸಾಕ್ಷಿಗಳ ಪೈಕಿ 20 ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಧೀಶ ದಿನೇಶ್ ಹೆಗ್ಡೆ ನಡೆಸಿದ್ದರು. ವಿಚಾರಣೆಯಲ್ಲಿ ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ತಲಾ 5000ರೂ. ದಂಡ ವಿಧಿಸಿ ಆದೇಶ ನೀಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದಿಸಿದ್ದರು.