ಕೆಮ್ಮಣ್ಣು ತೂಗು ಸೇತುವೆ ದುರಸ್ಥಿಗೆ ಮುಂದಾದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್
ಉಡುಪಿ: ಗುಜರಾತ್ ಮೊರ್ಬಿ ದುರಂತದ ಬಳಿಕ ಶಿಥಿಲಾವಸ್ಥೆಯ ಕಾರಣಕ್ಕೆ ಮುಚ್ಚಲಾಗಿರುವ ಕೆಮ್ಮಣ್ಣು ತೂಗು ಸೇತುವೆಯ ದುರಸ್ಥಿಗೆ ಮಲ್ಪೆಯಲ್ಲಿ ಶಿಪ್‌ಯಾರ್ಡ್ ಉದ್ಯಮ ನಡೆಸುತ್ತಿರುವ ಉಡುಪಿ ಕೊಚಿನ್ ಶಿಪ್‌ಯಾರ್ಡ್ ಮುಂದಾಗಿದೆ.
ಮಂಡಲ ಪಂಚಾಯತ್ ಕಾಲದಲ್ಲಿ ತಿಮ್ಮಣ್ಣಕುದ್ರುವಿನ ಜನರ ಸಂಪರ್ಕಕ್ಕಾಗಿ ಪಂಚಾಯತ್ ಅನುದಾನ, ಸ್ಥಳೀಯರ ದೇಣಿಗೆ ಮತ್ತು ಸುರತ್ಕಲ್ ಕೆಆರ್‌ಇಸಿ ಕಾಲೇಜಿನ ಎನ್‌ಸಿಸಿ ತಂಡದ ಪರಿಶ್ರಮದಲ್ಲಿ ಗಿರೀಶ್ ಭಾರದ್ವಾಜ್‌ರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿದ್ದ ಪಡುಕುದ್ರು-ತಿಮ್ಮಣ್ಣಕುದ್ರು ನಡುವಿನ ತೂಗು ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಇದರ ದುರಸ್ಥಿಗೆ ಅನುದಾನ ಲಭ್ಯತೆಯ ಕೊರತೆ ಕಾಣಿಸಿಕೊಂಡಿರುವುದರಿಂದ ಗ್ರಾಪಂ ಆಡಳಿತ ಮಂಡಳಿ ಸೇತುವೆಯನ್ನು ಮುಚ್ಚುವ ತೀರ್ಮಾನ ಕೈಗೊಂಡಿತ್ತು. ಅದರಂತೆ ಸೇತುವೆ ದುರಸ್ಥಿ ಆಗುವವರೆಗೆ ತಾತ್ಕಾಲಿಕವಾಗಿ ಮುಚ್ಚಲಾಯಿತು.
ಗುಜರಾತಿನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ದುರಂತದ ಬಳಿಕ ಕೆಮ್ಮಣ್ಣು ತೂಗು ಸೇತುವೆ ದುರಸ್ಥಿಯ ಬಗ್ಗೆ ಒತ್ತಡ ಹೆಚ್ಚಿತ್ತು. ಅದಕ್ಕೂ ಮೊದಲೇ ಗ್ರಾಪಂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂಗೆ ಈ ಬಗ್ಗೆ ವರದಿ ಮಾಡಿ ದುರಸ್ಥಿಯ ಅನಿವಾರ್ಯತೆ ಮತ್ತು ಅದಕ್ಕೆ ಅನುದಾನ ಕೊರತೆ ಇರುವುದರ ಬಗ್ಗೆ ತಿಳಿಸಿತ್ತು. ಆದರೆ ಅದಕ್ಕೆ ಯಾವುದೇ ಸ್ಪಂದನೆ ದೊರೆತಿರಲಿಲ್ಲ.
ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿರುವುದು ಖಚಿತ ಪಟ್ಟಿರುವುದರಿಂದ ಮತ್ತು ಅದರ ಪುನರ್ ನಿರ್ಮಾಣಕ್ಕೆ ಅನುದಾನ ಲಭ್ಯತೆ ಖಚಿತ ಪಟ್ಟ ಬಳಿಕವಷ್ಟೇ ಮುಚ್ಚಿರುವ ತೂಗು ಸೇತುವೆಯನ್ನು ತೆರವುಗೊಳಿಸಲು ಗ್ರಾಪಂ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿತು. ಸದ್ಯ ತಿಮ್ಮಣ್ಣ ಕುದ್ರುವಿನ ಜನರು ಸಂಪರ್ಕಕ್ಕೆ ಹೊಸ ಸೇತುವೆ ಬಳಸಿಕೊಳ್ಳುತ್ತಿದ್ದು, ಈ ತೂಗು ಸೇತುವೆಯನ್ನು ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಸೇತುವೆ ಮುಚ್ಚಿರುವುದರಿಂದ ಅಲ್ಲಿ ನಡೆಯುತ್ತಿರುವ ಕಾಯಕಿಂಗ್ ಬೋಟಿಂಗ್ ಪ್ರವಾಸೋದ್ಯಮಕ್ಕೆ ತೊಂದರೆ ಆಗಿರುವ ಬಗ್ಗೆಯೂ ಜಿಲ್ಲಾಡಳಿತ ಗಮನಹರಿಸಿದೆ.
ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಅಧೀನದ ಮಲ್ಪೆಯಲ್ಲಿ ಶಿಪ್ ಯಾರ್ಡ್ ಉದ್ಯಮ ನಡೆಸುತ್ತಿರುವ ಉಡುಪಿ ಕೊಚಿನ್ ಶಿಪ್ ಯಾರ್ಡ್‌ನ್ನು ಸಂಪರ್ಕಿಸ ಲಾಯಿತು. ಇದರ ಮುಂದುವರಿಕೆಯಾಗಿ ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎಚ್.ಪ್ರಸನ್ನ, ಗುರುವಾರ ಈ ಬಗ್ಗೆ ತಂಡವೊಂದನ್ನು ಕಳುಹಿಸಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀನಾಥ್, ಉಡುಪಿ ಕೊಚಿನ್ ಶಿಪ್ ಯಾರ್ಡಿನ ಮ್ಯಾನೇಜರ್ ಶಶಿಕಾಂತ್ ಕೋಟ್ಯಾನ್, ಶಿಪ್ ಯಾರ್ಡಿನ ಸಿವಿಲ್ ಇಂಜಿನಿಯರ್, ಗಿರೀಶ್ ಭಾರದ್ವಾಜ್‌ರ ಭಾರತ್ ನಿರ್ಮಾಣ್ ಪ್ರತಿನಿಧಿಗಳ ತಂಡವು ಗ್ರಾಪಂನ ಪ್ರತಿನಿಧಿಗಳ ಜೊತೆ ತೆರಳಿ ಸೇತುವೆ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ತೂಗು ಸೇತುವೆಯ ದುರಸ್ಥಿಗೆ 50 ಲಕ್ಷ ರೂ. ಅನುದಾನ ವನ್ನು ಅಂದಾಜಿಸಲಾಗಿದ್ದು, ಈ ಕಾರ್ಯ ಶಿಪ್‌ಯಾರ್ಡ್‌ನಿಂದ ಮಾಡಲು ಸಿದ್ಧವಿರುವುದಾಗಿ ಮ್ಯಾನೆಜರ್ ಶಶಿಕಾಂತ್ ತಿಳಿಸಿದರು. ಈ ಬಗ್ಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ನೀಡುವ ವರದಿಯಂತೆ ಜಿಲ್ಲಾಡಳಿತವು ಶಿಪ್‌ಯಾರ್ಡ್‌ಗೆ ಆದೇಶ ಹೊರಡಿಸಿದ್ದಲ್ಲಿ ಭಾರಾಧ್ವಾಜ್ ಸಂಸ್ಥೆಯ ಪರಿಣಿತ ಸಿಬಂದಿಗಳ ತೊಡಗಿಸಿಕೊಳ್ಳುವಿಕೆಯಿಂದ ಕಾಮಗಾರಿ ನಡೆಸ ಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲತಾ, ಪಿಡಿಓ ಕಮಲಾ, ಕಾರ್ಯದರ್ಶಿ ದಿನಕರ್, ಸಿಬ್ಬಂದಿ ಸಂತೋಷ್, ಪ್ರಕಾಶ್, ಸದಸ್ಯರಾದ ಆಶಾ, ಯಶೋದಾ, ಹೈದರ್ ಅಲಿ, ಡಾ.ಫಹೀಮ್ ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.