ಬಾಲಭವನದ ವಾರಾಂತ್ಯ ಕಾರ್ಯಕ್ರಮ ಸಮಾರೋಪ
ಉಡುಪಿ: ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯ ದಲ್ಲಿ ವಾರಾಂತ್ಯ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಶನಿವಾರ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಮಾತನಾಡಿ, ಮಕ್ಕಳ ಪ್ರತಿಭಾ ಅನಾವರಣಕ್ಕೆ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು.
ಅತಿಥಿಗಳಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್, ಶ್ರೀರಕ್ಷಾ, ಹೇಮಲತಾ ಉಪಸ್ಥಿತರಿದ್ದರು. ಜಿಲ್ಲಾ ಬಾಲಭವನದ ಕಛೇರಿ ಸಹಾಯಕಿ ಶ್ವೇತಾ ಸ್ವಾಗತಿಸಿ, ವಂದಿಸಿದರು. ಸಂಯೋಜಕಿ ರಮ್ಯಾ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.
ವಾರಾಂತ್ಯ ಶಿಬಿರದಲ್ಲಿ ಮಕ್ಕಳಲ್ಲಿ ಅಭಿವ್ಯಕ್ತವಾದ ಚಿತ್ರಕಲೆ, ಕರಕುಶಲ, ನೃತ್ಯ, ಸಂಗೀತ, ಯಕ್ಷಗಾನ, ಯೋಗ ವಿವಿಧ ಕಲಾ ಪ್ರಕಾರಗಳು ಪ್ರದರ್ಶನಗೊಂಡವು. ಒಟ್ಟು ೭೦ ಮಕ್ಕಳು ಹಾಜರಿದ್ದರು.