×
Ad

ಎಸ್‌ಸಿಎಸ್‌ಟಿ ಅಭಿವೃದ್ಧಿಗೆ ಬಜೆಟ್‌ನಲ್ಲಿ 2000 ಕೋಟಿ ರೂ. ಹೆಚ್ಚಿನ ಅನುದಾನ: ಸಚಿವ ಕೋಟ

Update: 2023-02-18 20:37 IST

ಕುಂದಾಪುರ: ಕರ್ನಾಟಕ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಇಲಾಖೆಗೆ ಮಾಮೂಲಿಗಿಂತ 2 ಸಾವಿರ ಕೋಟಿ ಹೆಚ್ಚಿನ ಅನುದಾನ ಮೀಸಲಿರಿಸಿದ್ದು, ಅದರ ಒಂದೊಂದು ಪೈಸೆಯೂ ಸಕಾರಣಕ್ಕೆ ವಿನಿಯೋಗವಾದಾಗ ಸರಕಾರದ ಶ್ರಮ ಸಾರ್ಥಕ ವಾಗುತ್ತದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರ ತಾಲೂಕಿನ ಹೊಂಬಾಡಿ ಮಂಡಾಡಿಯ ಸುಣ್ಣಾರಿ ಎಂಬಲ್ಲಿನ ಪ.ಪಂಗಡದ ಕುಸುಮ ಅವರ ನಿವಾಸದಲ್ಲಿ ಶನಿವಾರ ಗಂಗಾಕಲ್ಯಾಣ ಯೋಜನೆಗೆ ಚಾಲನೆ ನೀಡಿದ ಬಳಿಕ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮದ್ಯವರ್ತಿಗಳ ಹಾವಳಿಯಿಲ್ಲದೆ ಕೊಳವೆ ಬಾವಿ ನಿರ್ಮಾಣದ ಹಣವನ್ನು ಫಲಾನುಭವಿಗಳ ಖಾತೆಗೆ ನೇರ ಜಮಾ ಮಾಡುವ ನೇರ ಖಾತೆ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ಹೊಂಬಾಡಿ-ಮಂಡಾಡಿಯಲ್ಲಿ ಚಾಲನೆಗೆ ನೀಡಲಾಗುತ್ತಿದೆ ಎಂದರು.

ಸಾಮಾನ್ಯ ಜನರಿಗೆ ಸವಲತ್ತು ಸಿಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡುವ ಸಲುವಾಗಿ ಸರಕಾರ ಸಾಕಷ್ಟು ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಪ.ಜಾತಿ ಹಾಗೂ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ ಉದ್ಯೋಗಕ್ಕಾಗಿ ದ್ವಿಚಕ್ರವಾಹನ, ಹಿಂದುಳಿದ ವರ್ಗದವರಿಗೆ ಹೊಲಿಗೆ ಯಂತ್ರ ನೀಡುವ ಕೆಲಸ ಮಾಡಲಾಗಿದೆ. ಸಾಮಾನ್ಯ ಜನರಿಗೆ ಬದುಕು ಕಟ್ಟಿಕೊಳ್ಳಲು ಸರಕಾರ ಹಾಗೂ ಇಲಾಖೆ ಕಠಿಬದ್ಧವಾಗಿದೆ ಎಂದು ಅವರು ತಿಳಿಸಿದರು.

ಹೊಂಬಾಡಿ ಮಂಡಾಡಿ ಗ್ರಾಪಂ ಉಪಾಧ್ಯಕ್ಷೆ ಸವಿತಾ ಡಿ.ನಾಯ್ಕ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಧಾ, ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಂಕರ್ ಮಲ್ಲಾರ್, ಲಿಡ್ಕರ್ ಉಡುಪಿ ಜಿಲ್ಲಾ ಸಂಯೋಜಕ ವೆಂಕಟೇಶ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೊಲಿಗೆ ಯಂತ್ರ ಹಾಗೂ ತರಬೇತಿ ಪಡೆದವರಿಗೆ ಪ್ರಮಾಣಪತ್ರವನ್ನು ಸಚಿವರು ವಿತರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಸ್ವಾಗತಿಸಿದರು. ಇಲಾಖೆಯ ಕುಂದಾಪುರ ಕಚೇರಿ ವ್ಯವಸ್ಥಾಪಕ ರಮೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Similar News