ಬಜೆಟ್‌ನಿಂದ ನಿರಾಶೆ; ಫೆ.22ರಂದು ಸಿಎಂ ಮನೆ ಎದುರು ಧರಣಿ: ಹೊರಗುತ್ತಿಗೆ ನೌಕರರ ಸಂಘ ನಿರ್ಧಾರ

Update: 2023-02-18 16:07 GMT

ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರನ್ನು ನೇರಪಾವತಿಗೆ ಒಳಪಡಿಸದೆ ಸರಕಾರ ನಿರಾಶೆ ಮೂಡಿಸಿದೆ. ಒಟ್ಟಾರೆ ಬಜೆಟ್ ಹೊರಗುತ್ತಿಗೆ ನೌಕರರ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿನ ಹೊರಗುತ್ತಿಗೆ ನೌಕರರ ಸಂಘ ತಿಳಿಸಿದೆ.

ಕಳೆದ ಜುಲೈನಲ್ಲಿ ನಡೆದ ಪ್ರತಿಭಟನೆ ಸಂಧರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಸ ಸಾಗಿಸುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್, ಹೆಲ್ಬರ್ಸ್, ಯೂಜಿಡಿ ಕಾರ್ಮಿಕರು, ಡಾಟಾ ಆಪರೇಟರುಗಳು, ಬೀದಿದೀಪ ನಿರ್ವಾಹಕರು, ಗಾರ್ಡನರುಗಳು, ಕಚೇರಿ ಸಹಾಯಕರು, ಸ್ಮಶಾನ ಕಾವಲುಗಾರರು ಸೇರಿದಂತೆ ಎಲ್ಲರನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ತರುವುದಾಗಿ ಸ್ವತಃ ಮುಖ್ಯಮಂತ್ರಿಗಳು ಘೋಷಿಸಿದ್ದರು. ಆದರೆ ಈ ಘೋಷಣೆ ಬಜೆಟ್‌ನ ಮೂಲಕ ಸುಳ್ಳಾಗಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಸರಕಾರ ಹೊರಗುತ್ತಿಗೆ ನೌಕರರಿಗೆ ಸೇವಾಭದ್ರತೆ ನೀಡುವಲ್ಲಿ ವಿಫಲವಾಗಿದೆ. ನಗರಗಳ ಸ್ವಚ್ಚತೆ, ಕುಡಿಯುವ ನೀರಿನ ಸಮರ್ಪಕ ಸೇವೆಯಲ್ಲಿ ತೊಡಗಿಕೊಂಡಿರುವ ಹೊರಗುತ್ತಿಗೆ ನೌಕರರನ್ನು ಈ ಬಜೆಟ್ ವಂಚಿಸಿದೆ. ಕೊರೋನಾ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ದುಡಿದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಸರಕಾರ ನೀಡುವ ಗೌರವ ಇದಾಗಿದೆ ಎಂದು ಸಂಘ ವಿಷಾಧಿಸಿದೆ.

ಈ ಹಿಂದೆ ಸರಕಾರ ಘೋಷಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡುವ ಸಲುವಾಗಿ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿ ಜಾರಿಗೊಳಿಸಲೇಬೇಕು. ಇದಕ್ಕಾಗಿ ಇದೇ ಫೆ.೨೨ರಂದು ‘ನಮ್ಮ ನಡಿಗೆ ಮುಖ್ಯಮಂತ್ರಿಗಳ ಮನೆ ಕಡೆಗೆ’ ಎಂಬ ಘೋಷಣೆಯೊಂದಿಗೆ ಮುಖ್ಯಮಂತ್ರಿಗಳ ಮನೆ ಎದುರು ಧರಣಿ ನಡೆಸಲಿದ್ದೇವೆ. ಈಗಲಾದರೂ ಸರಕಾರ ಎಚ್ಚೆತ್ತು, ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸಿ ಹಂತಹಂತವಾಗಿ ಖಾಯಂಗೊಳಿಸುವಂತೆ ಆಗ್ರಹಿಸುತ್ತೇವೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

Similar News