ಉಳ್ಳಾಲ: ಪಿಯು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಉಳ್ಳಾಲ, ಫೆ.19: ತಾಯಿ ಗದರಿದ ಕಾರಣಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರಾವಸ್ಥೆಯಲ್ಲಿದ್ದ ಕುಂಪಲದ ಬಾಲಕಿಯೊಬ್ಬಳು ಇಂದು ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ವರದಿಯಾಗಿದೆ.
ಕುಂಪಲ ಆಶ್ರಯ ಕಾಲನಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಸೋಮನಾಥ ಮತ್ತು ಭವ್ಯಾ ದಂಪತಿಯ ಹಿರಿಯ ಪುತ್ರಿ ಧನ್ಯಾ(17) ಮೃತ ವಿದ್ಯಾರ್ಥಿನಿ. ಇವರು ನಗರದ ರಾಮಕೃಷ್ಣ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದರು.
ಉಪ್ಪಿನಕಾಯಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ತಾಯಿ ಭವ್ಯಾ ಫೆ.14ರಂದು ಮದ್ಯಾಹ್ನ ಮನೆಗೆ ಬಂದಾಗ ಕಾಲೇಜಿಗೆ ರಜೆಯಲ್ಲಿದ್ದ ಪುತ್ರಿ ಧನ್ಯಾ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಅಪರಾಹ್ನ 3 ಗಂಟೆ ಸುಮಾರಿಗೆ ಮನೆಗೆ ಆಗಮಿಸಿದ ಧನ್ಯಾರನ್ನು ಇಷ್ಟು ಹೊತ್ತು ಎಲ್ಲಿ ಹೋಗಿದ್ದೆ ಎಂದು ಪ್ರಶ್ನಿಸಿ ತಾಯಿ ಗದರಿಸಿದರೆನ್ನಲಾಗಿದೆ. ಇದರಿಂದ ನೊಂದ ಧನ್ಯಾ ತಾಯಿ ಪಕ್ಕದ ಮನಗೆ ತೆರಳಿದ್ದ ವೇಳೆ ಮನೆಯೊಳಗಿದ್ದ ಗೆದ್ದಲು ಹೊಡೆಯುವ ಕೀಟನಾಶಕ ಸೇವಿಸಿದ್ದಾರೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಧನ್ಯಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರಿಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.