×
Ad

ಮುಂಡ್ಕೂರು ಜಾತ್ರೆಯಲ್ಲಿ ಪಟಾಕಿ ಸಿಡಿದು ಓರ್ವ ವೃದ್ಧ ಸಹಿತ ಮೂವರು ಮಕ್ಕಳಿಗೆ ಗಾಯ

Update: 2023-02-20 14:59 IST

ಕಾರ್ಕಳ, ಫೆ.20: ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.18ರ ಶನಿವಾರ ರಾತ್ರಿ ಬ್ರಹ್ಮರಥೋತ್ಸವದ ಸಂದರ್ಭ ಸಿಡಿಮದ್ದು ಪ್ರದರ್ಶನದ ವೇಳೆ ದಾಸ್ತಾನರಿಸಿದ್ದ ಪಟಾಕಿ ರಾಶಿಗೆ ಬೆಂಕಿ ಬಿದ್ದ ಪರಿಣಾಮ ಓರ್ವ ವೃದ್ಧ ಸಹಿತ ಮೂವರು ಬಾಲಕರು ಗಾಯಗೊಂಡಿರುವುದು ವರದಿಯಾಗಿದೆ.

 ಬ್ರಹ್ಮರಥೋತ್ಸವದ ವೇಳೆ ನೂರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭ ಸಿಡಿದ ಸಿಡಿಮದ್ದಿನ ಕಿಡಿ ಪಟಾಕಿ ದಾಸ್ತಾನಿನ ಮೇಲೆಯೇ ಬಿದ್ದಿದೆ. ಇದರಿಂದ ಭಾರೀ ಪ್ರಮಾಣದಲ್ಲಿದ್ದ ಪಟಾಕಿ ಯದ್ವಾತದ್ವಾ ಸಿಡಿದಿದೆ. ಇದರಿಂದ ಮೂವರು ಮಕ್ಕಳು, ಓರ್ವ ವೃದ್ಧ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭಾರೀ ಜನಸಂಖ್ಯೆ ಸೇರುವ ಜಾತ್ರಾ ಸಮಯದಲ್ಲಿ ಯಾವುದೇ ಪ್ರಥಮ ಚಿಕಿತ್ಸಾ ಕೊಠಡಿ ಅಥವಾ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸದಿರುವ ದೇವಸ್ಥಾನ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಡಿಮದ್ದು ಪ್ರದರ್ಶಿಸುವ ಸ್ಥಳದಲ್ಲೇ ಪೇಟೆಯ ಮಧ್ಯಭಾಗದಲ್ಲಿ ದುರ್ನಾತ ಬೀರುವ ಬೃಹತ್ ಹೊಂಡವೊಂದಿದ್ದು ಅದಕ್ಕೆ ಹಳೇ ತಗಡು ಶೀಟುಗಳನ್ನು ಮುಚ್ಚಲಾಗಿದ್ದು, ಬೃಹತ್ ಪಟಾಕಿ ಸಿಡಿಯುವ ವೇಳೆ ಓಡುವ ಭರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಈ ಹೊಂಡಕ್ಕೆ ಬಿದ್ದು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

Similar News