ದೇವಳಗಳ ನಿರ್ವಹಣೆ ಸರಕಾರದ ಬದಲು ಹಿಂದುಗಳಿಗೆ ನೀಡಿ: ಜೆ.ಪಿ.ನಡ್ಡಾ ಜೊತೆ ಸಮಾಲೋಚನಾ ಸಭೆಯಲ್ಲಿ ಸಂತರ ಒತ್ತಾಯ
ಉಡುಪಿ: ಸಮಾನ ನಾಗರಿಕ ಸಂಹಿತೆ ಜಾರಿ, ತುಳು ಭಾಷೆಗೆ ಸೂಕ್ತ ಮಾನ್ಯತೆ, ದೇವಳಗಳ ನಿರ್ವಹಣೆ ಹಿಂದುಗಳಿಗೆ ವಹಿಸಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪಟ್ಟಿಯನ್ನು ಕರಾವಳಿಯ ಸಾಧು ಸಂತರು ಇಂದು ಪೇಜಾವರ ಮಠದ ಶ್ರೀರಾಮವಿಠಲ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದರು.
ಸಭೆಯನ್ನು ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಬೈಲೂರು ಶ್ರೀ ರಾಮಕೃಷ್ಣ ಆಶ್ರಮದ ಶ್ರೀವಿನಾಯಕಾನಂದ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ಸ್ವಾಮೀಜಿ, ಮೂಡಬಿದ್ರೆ ಜೈನಮಠದ ಶ್ರೀಸ್ವಸ್ತಿ ಶ್ರೀಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಣಿಲ ಶ್ರೀಮೋಹನದಾಸ ಸ್ವಾಮೀಜಿ, ಆನೆಗೊಂದಿ ಸರಸ್ವತಿ ಪೀಠದ ಶ್ರೀಕಾಳ ಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ, ಗುರಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಜರಿದ್ದರು.
ಉಗ್ರವಾದಿ ಚಟುವಟಿಕೆಗಳನ್ನು ಮಟ್ಟಹಾಕಲು ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸಬೇಕು. ಸನಾತನ ಧರ್ಮ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು. ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯಮಿಕ ಔದ್ಯೋಗಿಕ ಪ್ರಗತಿಗೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು.
ದೇವಳಗಳ ನಿರ್ವಹಣೆಯನ್ನು ಸರಕಾರ ನಡೆಸದೆ ಹಿಂದುಗಳಿಗೆ ವಹಿಸಿಕೊಡ ಬೇಕು. ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಯ ಜೊತೆಗೆ ಗೋ ಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡಬೇಕು. ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡಬೇಕು. ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ನಡ್ಡಾ ಅವರಿಗೆ ಸಂತರು ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ‘ಸಮಾಜಕ್ಕೆ ಒಳಿತಾಗುವ ಬೇಡಿಕೆಗಳನ್ನು ನಡ್ಡಾ ಅವರಿಗೆ ಸಲ್ಲಿಸಿದ್ದೇವೆ. ಮುಂದೆ ಅವರು ಅದನ್ನು ಈಡೇರಿಸುತ್ತಾರೆ ಎಂಬುದು ನಮ್ಮ ನಂಬಿಕೆ. ಈ ಬಗ್ಗೆ ಅವಶ್ಯಕವಾಗಿ ಗಮನ ಹರಿಸಿ ಮುಂದಿನ ದಿನಗಳಲ್ಲಿ ಜಾರಿಗೊಳಿಸಲು ಪ್ರಯತ್ನಿ ಸುವುದಾಗಿ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
ಸಭೆಯಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವರಾದ ಎಸ್.ಅಂಗಾರ, ಸುನೀಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ಸುಪ್ರಸಾದ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
‘ಇನ್ನೊಂದು ಪಕ್ಷದವರು ಬಂದರು ಕೂಡ ನಾವು ಇದೇ ವಿಚಾರವನ್ನು ಅವರ ಮುಂದೆ ಇಡುತ್ತೇವೆ. ನಮಗೆ ಪಕ್ಷ ಮುಖ್ಯ ಅಲ್ಲ. ಸಮಾಜಕ್ಕೆ ಬೇಕಾಗಿರುವುದನ್ನು ನಾವು ಯಾವುದೇ ಸರಕಾರ, ಜನಪ್ರತಿನಿಧಿಗಳು ಬಂದರು ಕೂಡ ಈ ರೀತಿಯ ಸಭೆ ನಡೆಸಲು ಸಿದ್ಧರಿದ್ದೇವೆ. ಅವರಿಗೂ ಸ್ವಾಗತ ಇದೆ’
-ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
‘ಎಲ್ಲ ಧಾರ್ಮಿಕ ಮತ್ತು ರಾಜಕೀಯ ನಾಯಕರು ಜೊತೆಯಾಗಿ ಹೋದರೆ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಸಭೆಯಲ್ಲಿ ನಾವು ವೈಯಕ್ತಿಕವಾಗಿ, ಚುನಾವಣಾ ಪದ್ಧತಿ ಪರಿಷ್ಕೃತ ಆಗಬೇಕು ಎಂದು ಒತ್ತಾಯಿಸಿದೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿರುವ ಕೆಲವು ಲೋಪದೋಷಗಳನ್ನು ಸರಿಪಡಿಸಬೇಕು. ಶೇ.೫೦ಕ್ಕಿಂತ ಹೆಚ್ಚು ಮತ ಪಡೆದವರನ್ನು ವಿಜಯಿ ಎಂಬುದಾಗಿ ಘೋಷಣೆ ಮಾಡಬೇಕು. ಬಹುಜನರ ಬೆಂಬಲ ಇರುವವರನ್ನು ಆಯ್ಕೆ ಮಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಸಲಹೆ ನೀಡಿದ್ದೇನೆ’
-ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ