×
Ad

12 ಪ್ರತಿಪಕ್ಷ ಸಂಸದರ ನಡವಳಿಕೆ ಕುರಿತು ತನಿಖೆ: ಹಕ್ಕು ಸಮಿತಿಗೆ ಧನಕರ್ ಸೂಚನೆ

Update: 2023-02-20 23:24 IST

ಹೊಸದಿಲ್ಲಿ,ಫೆ.20: ಪದೇ ಪದೇ ಸದನದ ಅಂಗಳವನ್ನು ಪ್ರವೇಶಿಸಿದ್ದಕ್ಕಾಗಿ, ಘೋಷಣೆಗಳನ್ನು ಕೂಗಿದ್ದಕ್ಕಾಗಿ ಮತ್ತು ಅದರ ಕಲಾಪಗಳಿಗೆ ಅಡ್ಡಿಪಡಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಆಪ್ನ 12 ಸಂಸದರ ವಿರುದ್ಧ ಹಕ್ಕುಚ್ಯುತಿ ಆರೋಪಗಳ ಕುರಿತು ತನಿಖೆ ನಡೆಸುವಂತೆ ರಾಜ್ಯಸಭೆಯ ಸಭಾಪತಿ ಜಗದೀಪ ಧನಕರ್ ಅವರು ಹಕ್ಕು ಸಮಿತಿಗೆ ಸೂಚಿಸಿದ್ದಾರೆ.

ರಾಜ್ಯಸಭೆಯು ಫೆ.18ರಂದು ಹೊರಡಿಸಿರುವ ಬುಲೆಟಿನ್ ಪ್ರಕಾರ ಒಂಭತ್ತು ಸಂಸದರು ಕಾಂಗ್ರೆಸ್ ಗೆ ಮತ್ತು ಮೂವರು ಸಂಸದರು ಆಪ್ ಗೆ ಸೇರಿದವರಾಗಿದ್ದಾರೆ.

ಶಕ್ತಿಸಿಂಗ್ ಗೋಹಿಲ್,ನರನಭಾಯಿ ಜೆ.ರಥ್ವಾ,ಸೈಯದ್ ನಾಸಿರ್ ಹುಸೇನ್, ಕುಮಾರ್ ಕೇತ್ಕರ್,‌ ಇಮ್ರಾನ್ ಪ್ರತಾಪಗಡಿ, ಎಲ್.ಹನುಮಂತಯ್ಯ, ಫುಲೋದೇವಿ ನೇತಂ, ಜೆಬಿ ಮಾಥೆರ್ ಹಿಶಾಂ ಮತ್ತು ರಂಜಿತ್ ರಂಜನ್ ಅವರು ಕಾಂಗ್ರೆಸ್ ಸದಸ್ಯರಾಗಿದ್ದರೆ ಸಂಜಯ್ ಸಿಂಗ್,‌ ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಪಾಠಕ್ ಆಪ್ ಸದಸ್ಯರಾಗಿದ್ದಾರೆ.

ಈ ತಿಂಗಳ ಪೂರ್ವಾರ್ಧದಲ್ಲಿ ಸಮಾರೋಪಗೊಂಡ ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷ ಸದಸ್ಯರ ಪ್ರತಿಭಟನೆಗಳಿಂದಾಗಿ ರಾಜ್ಯಸಭೆಯಲ್ಲಿ ಕಲಾಪಗಳಿಗೆ ಪದೇ ಪದೇ ಅಡ್ಡಿಯುಂಟಾಗಿತ್ತು.

Similar News