ರಾಜ್ಯೋತ್ಸವ, ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಸಾಹಿತಿ, ನಿವೃತ್ತ ಶಿಕ್ಷಕ ಅಂಬಾತನಯ ಮುದ್ರಾಡಿ ನಿಧನ
ಉಡುಪಿ, ಫೆ.21: ಸಾಹಿತಿ, ಕವಿ, ಹರಿಕಥಾ ಪ್ರವೀಣ, ವೇಷಧಾರಿ ಹಾಗೂ ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಯಾಗಿದ್ದ ನಿವೃತ್ತ ಶಿಕ್ಷಕ, ಬಹುಮುಖ ಪ್ರತಿಭೆಯ ಅಂಬಾತನಯ ಮುದ್ರಾಡಿ ಎಂದೇ ಖ್ಯಾತರಾದ ಕೇಶವ ಶೆಟ್ಟಿಗಾರ್ ಮುದ್ರಾಡಿ ಮಂಗಳವಾರ ಮುಂಜಾನೆ ಮುದ್ರಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
88 ವರ್ಷ ಪ್ರಾಯದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ರಾಜ್ಯೋತ್ಸವ ಹಾಗೂ ಪಾರ್ತಿಸುಬ್ಬ ಪ್ರಶಸ್ತಿ ವಿಜೇತರಾದ ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಮುದ್ರಾಡಿಯಲ್ಲಿ ಜನಿಸಿದರು. ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಗೆ ನಿಂತರೂ ಅವರು ಪಡೆದ ಲೋಕಜ್ಞಾನ ಅಪಾರವಾಗಿತ್ತು. ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿ ಬೆಳೆದ ವ್ಯಕ್ತಿತ್ವ ಅಂಬಾತನಯರದು. ಸಾಹಿತ್ಯ ಪ್ರೇರಣೆಯನ್ನು ಅಂಬಾತನಯರಲ್ಲಿ ಬಿತ್ತಿದವರು ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟರು. ಸಾಹಿತ್ಯದ ವಿವಿಧ ಮಗ್ಗುಲುಗಳಲ್ಲಿ ಪರಿಶ್ರಮ ವಹಿಸಿದ ಅಂಬಾತನಯರು ಕೃಷಿಕರು ಆಗಿದ್ದರು.
ಅಂಬಾತನಯ ಮುದ್ರಾಡಿ ಸತತ ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ದುಡಿದಿದ್ದರು. ಯಕ್ಷಗಾನ ಕಲಾವಿದರಾಗಿ ಅವರು ಅಮೃತೇಶ್ವರಿ ಇಡುಗುಂಜಿ ಮೇಳದಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿದ್ದರು. ಸಾಹಿತಿಯಾಗಿ, ಯಕ್ಷಗಾನ ಪ್ರಸಂಗಕರ್ತನಾಗಿ ಹಲವು ಪ್ರಕಾರಗಳಲ್ಲಿ ಅವರು 200ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದರೂ ಸಾಕಷ್ಟು ಪ್ರಕಟಣೆಯ ಭಾಗ್ಯ ಕಂಡಿಲ್ಲ.ಅವರು ಕರ್ಣನ ಕುರಿತು ರಚಿಸಿದ ಪರಿತ್ಯಕ್ತ ನಾಟಕ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿತ್ತು.
ಸಾತ್ವಿಕ ಮನೋಭಾವದ ಸಹೃದಯಿ ವ್ಯಕ್ತಿಯಾಗಿದ್ದ ಅಂಬಾತನಯರು ಕಳೆದ ವಾರ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಪ್ರಥಮ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಸಮ್ಮೇಳನಾಧ್ಯಕ್ಷ ರೊಂದಿಗಿನ ಸಂವಾದದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದು ಅವರು ಭಾಗವಹಿಸಿದ ಕೊನೆಯ ಕಾರ್ಯಕ್ರಮವಾಗಿತ್ತು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಅಂಬಾತನಯ ಮುದ್ರಾಡಿ ಅವರಿಗೆ 2008ರಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ, 2019ನೇ ಸಾಲಿನ ರಾಜ್ಯ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಗೌರವಗಳು ಲಭಿಸಿದ್ದವು. ಯಾದವ ರಾವ್ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಮಟ್ಟು ಗೋವರ್ಧನ ರಾವ್ ಪ್ರಶಸ್ತಿ, ಮುಂಬಯಿ ಪದವೀಧರ ಯಕ್ಷಗಾನ ಪ್ರಶಸ್ತಿ, ಪೊಳಲಿ ಶಾಸ್ತ್ರೀ ಪ್ರಶಸ್ತಿ, ಕುಕ್ಕಿಲ ಕೃಷ್ಣಭಟ್ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಸಾಹಿತ್ಯ ಕಲಾ ವಾಚಸ್ಪತಿ ಪ್ರಶಸ್ತಿ, ಪತ್ರಿಕಾ ದಿನದ ಗೌರವ, ಯಕ್ಷಗಾನ ಕಲಾರಂಗದ ಗೌರವ, ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಶ್ರೀ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿದ್ದವು.
ಸಂತಾಪ: ಅಂಬಾತನಯ ಮುದ್ರಾಡಿ ಅವರ ನಿಧನಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರು ಹಾಗೂ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರು, ಉಡುಪಿ ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.