ಜಾತಿ ತಾರತಮ್ಯ ನಿಷೇಧಿಸಿ ಕಾನೂನು ಜಾರಿಗೊಳಿಸಿದ ಅಮೆರಿಕದ ಸಿಯಾಟ್ಲ್‌

Update: 2023-02-22 06:40 GMT

ನ್ಯೂಯಾರ್ಕ್:‌ ಅಮೆರಿಕಾದ ಸಿಯಾಟ್ಲ್‌ ಸಿಟಿ ಕೌನ್ಸಿಲ್‌ ಮಂಗಳವಾರ ತನ್ನ ತಾರತಮ್ಯ-ನಿಗ್ರಹ ಕಾನೂನುಗಳಿಗೆ ಜಾತಿಯನ್ನೂ ಸೇರಿಸಿದೆ ಹಾಗೂ ಈ ಮೂಲಕ ಜಾತಿ ತಾರತಮ್ಯವನ್ನು ನಿಷೇಧಿಸಿದ ಪ್ರಥಮ ಅಮೆರಿಕನ್‌ ನಗರವಾಗಿದೆ.

ಜಾತಿ ಆಧಾರಿತ ತಾರತಮ್ಯ ಅಥವಾ ಜನರ ಹುಟ್ಟು ಅಥವಾ ಜನಾಂಗ ಆಧಾರಿತ ತಾರತಮ್ಯವನ್ನು ನಿಷೇಧಿಸಬೇಕೆಂಬುದು ಅಮೆರಿಕಾದಲ್ಲಿನ ದಕ್ಷಿಣ ಏಷ್ಯಾ ಮೂಲದ ಜನರ ಬಹುಕಾಲದ ಬೇಡಿಕೆಯಾಗಿತ್ತು.

ಮಂಗಳವಾರ 6-1 ಮತಗಳಿಂದ ಈ ಹೊಸ ಕಾನೂನು ಅಂಗೀಕಾರಗೊಂಡಿದೆ. ಸಿಯಾಟ್ಲ್‌ ಸಿಟಿ ಕೌನ್ಸಿಲ್‌ನಲ್ಲಿರುವ ಏಕೈಕ ಭಾರತೀಯ ಅಮೆರಿಕನ್‌ ಸದಸ್ಯೆಯಾಗಿರುವ ಕ್ಷಮಾ ಸಾವಂತ್‌ ಈ ಹೊಸ ಕಾನೂನನ್ನು ಪ್ರಸ್ತಾಪಿಸಿದ್ದರಲ್ಲದೆ ಇಂದು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಬದಲು ರಾಷ್ಟ್ರೀಯ ಮತ್ತು ಧರ್ಮಗಳ ಗಡಿಗಳಾಚೆ ಅನ್ವಯವಾಗುತ್ತದೆ ಎಂದಿದ್ದಾರೆ.

ಮಂಗಳವಾರ ಸಿಟಿ ಕೌನ್ಸಿಲ್‌ ಸಭೆ ಆರಂಭಕ್ಕೂ ಮುನ್ನ ಹೋರಾಟಗಾರರು ಸಿಯಾಟ್ಲ್‌ ನಗರಕ್ಕೆ ವಿವಿಧೆಡೆಗಳಿಂದ ಆಗಮಿಸಿದ್ದರು. ಸಭೆಯಲ್ಲಿ ಈ ವಿಚಾರದ ಕುರಿತು ಮಾತನಾಡಲು ಅನುಮತಿಯನ್ನು 100 ಕ್ಕೂ ಅಧಿಕ ಜನರು ಕೋರಿದ್ದರು. ತಮಗೆ ಮಂಗಳವಾರದ ಸಭೆಯಲ್ಲಿ ಮತದಾನ ನಡೆಯುವ ಮುನ್ನ ಮಾತನಾಡಲು ಅವಕಾಶ ದೊರೆಯಬಹುದೆಂಬ ಆಶಾಭಾವನೆಯೊಂದಿಗೆ ಆಗಮಿಸಿದ್ದರು. ಆದರೆ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿಲ್ಲ.

ಸಿಯಾಟ್ಲ್‌ ಸಿಟಿ ಕೌನ್ಸಿಲ್‌ ಕೈಗೊಂಡ ಕ್ರಮಕ್ಕೆ ಇಕ್ವಾಲಿಟಿ ಲ್ಯಾಬ್ಸ್‌ ಸಹಿತ ಹಲವು ಇತರ ದಲಿತ ಸಂಘಟನೆಗಳ ಬೆಂಬಲವಿದೆ. ಅದೇ ಸಮಯ ಹಿಂದು ಅಮೆರಿಕನ್‌ ಫೌಂಡೇಶನ್‌ ಮತ್ತು ಕೋಯೆಲಿಶನ್‌ ಆಫ್‌ ಹಿಂದೂಸ್‌ ಆಫ್‌ ನಾರ್ತ್‌ ಅಮೆರಿಕಾ ಈ ಕಾನೂನನ್ನು ವಿರೋಧಿಸಿತ್ತು.

Similar News