ಉಡುಪಿ | ತಂದೆಯನ್ನೇ ಕೊಲೆಗೈದ ಪ್ರಕರಣ: ಆರೋಪಿ ಮಗನಿಗೆ ಜೀವಾವಧಿ ಶಿಕ್ಷೆ
ಉಡುಪಿ, ಫೆ.22: ಎರಡು ವರ್ಷಗಳ ಹಿಂದೆ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣದ ಆರೋಪಿ ಮಗನಿಗೆ ಉಡುಪಿ ಎರಡನೇ ಹೆಚ್ಚುನವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಪೆರಂಪಳ್ಳಿ ಭಂಡಾರಮನೆ ನಿವಾಸಿ ಪ್ರಜೋತ್ ಶೆಟ್ಟಿ(50) ಕೊಲೆ ಆರೋಪಿ. 2020ರ ನ.13ರಂದು ಈತ ಕುಡಿಯಲು ಹಣ ನೀಡದ ಹಾಗೂ ಆಸ್ತಿ ಪಾಲು ಕೊಡದ ಕಾರಣಕ್ಕಾಗಿ ತನ್ನ ತಂದೆ ಮಹಾಬಲ ಶೆಟ್ಟಿ(82) ಎಂಬವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಲ್ಲದೆ, ಬಿಡಿಸಲು ಬಂದ ತಾಯಿ ಆಶಾಲತಾ ಶೆಟ್ಟಿ(76) ಎಂಬವರಿಗೆ ಕೈಯಿಂದ ಹಲ್ಲೆ ನಡೆಸಿದ್ದನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನ.14ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ತನಿಖೆ ನಡೆಸಿದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 35 ಸಾಕ್ಷಿಗಳ ಪೈಕಿ 25ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗಡೆ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ 302 ಕೊಲೆ ಪ್ರಕರಣದಡಿ ಜೀವಾವಧಿ ಜೈಲುಶಿಕ್ಷೆ ಹಾಗೂ 10ಸಾವಿರ ದಂಡ ಮತ್ತು 323 ಕೈಯಿಂದ ಹಲ್ಲೆ ನಡೆಸಿದ ಪ್ರಕರಣದಡಿ 3 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ನೀಡಿದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾಧಿಸಿದ್ದರು.