×
Ad

ಮಕ್ಕಳ ಕ್ಯಾನ್ಸರ್ ಬಗ್ಗೆ ಮನೋಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯ : ಅನುರಾಗ್ ರೆಡ್ಡಿ

Update: 2023-02-22 19:33 IST

ಮಂಗಳೂರು: ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ, ಚಿಕಿತ್ಸೆ ಮತ್ತು ಮನೋಸ್ಥೈರ್ಯ ಮೂಡಿಸುವ ಕಾರ್ಯದಲ್ಲಿ  ಸಮುದಾಯದ ಸಹಭಾಗಿತ್ವ ಅತೀ ಅಗತ್ಯ ಎಂದು ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ತಜ್ಞ ಡಾ. ಅನುರಾಗ್ ರೆಡ್ಡಿ ಹೇಳಿದ್ದಾರೆ.

ಲ್ಯಾಂಡ್ ಟ್ರೇಡ್  ಬಿಲ್ಡರ್ಸ್  ಆ್ಯಂಡ್ ಡೆವಲ್ಪರ್ಸ್,  ಅತ್ತಾವರ ಕೆಎಂಸಿ ಆಸ್ಪತ್ರೆ ಮತ್ತು ತಪಸ್ಯ ಫೌಂಡೇಶನ್ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂತರ್‌ರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದು ಮಗು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿದೆ. ಆದರೆ ದೊಡ್ಡವರ ಕ್ಯಾನ್ಸರ್‌ಗೆ  ಹೋಲಿಸಿದರೆ ಮಕ್ಕಳ ಕ್ಯಾನ್ಸರ್‌ನ್ನು  ಗುಣಪಡಿಸಬಹುದಾದ ಸಾಧ್ಯತೆ ಹೆಚ್ಚು. ಇದು ಸಮಾಧಾನಕರ ಸಂಗತಿ. ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚು ಖರ್ಚು ತಗಲುತ್ತದೆ. ಜತೆಗೆ ಸಮಯದ ತ್ಯಾಗವೂ ಬೇಕು. ಹಾಗಾಗಿ ಸರಕಾರೇತರ ಸಂಸ್ಥೆಗಳು, ಸಮುದಾಯದ ಸಹಭಾಗಿತ್ವ ಅವಶ್ಯ ಎಂದು ಡಾ ಅನುರಾಗ್ ಹೇಳಿದರು.

ಬಿಗ್‌ಬಾಸ್  ವಿಜೇತ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಅವರು ಮಾತನಾಡಿ, ಬದುಕಿನಲ್ಲಿ ಎದುರಾಗುವ ಕಷ್ಟಗಳು ದೇವರ ನೀಡುವ ಪರೀಕ್ಷೆ. ಎದುರಿಸುವ ಸಾಮರ್ಥ್ಯ ಇರುವವರಿಗೆ ಮಾತ್ರ ದೇವರು ಪರೀಕ್ಷೆಗಳನ್ನು, ಸವಾಲುಗಳನ್ನು ನೀಡುತ್ತಾನೆ. ಅದರಲ್ಲಿ ತೇರ್ಗಡೆಯಾದರೆ ದೇವರು ದೊಡ್ಡ ಬಹುಮಾನ ನೀಡುತ್ತಾನೆ ಎಂಬ ಮಾತಿದೆ. ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಖುಷಿಯ ಕ್ಷಣಗಳನ್ನು ಕಳೆದಿದ್ದೇವೆ ಎಂಬುದು ಮುಖ್ಯ ಎಂದು ಹೇಳಿದರು.

ಲ್ಯಾಂಡ್ ಟ್ರೇಡರ್ಸ್ ಆ್ಯಂಡ್ ಬಿಲ್ಡರ್ಸ್‌ನ  ಪ್ರವರ್ತಕ ಕೆ. ಶ್ರೀನಾಥ್ ಹೆಬ್ಬಾರ್ ಸ್ವಾಗತಿಸಿದರು. ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ ಸುಚೇತಾ ರಾವ್, ತಪಸ್ಯಾ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಸಬಿತಾ ಆರ್. ಶೆಟ್ಟಿ  ಅತಿಥಿಯಾಗಿ ಪಾಲ್ಗೊಂಡಿದ್ದರು. ಲ್ಯಾಂಡ್ ಟ್ರೇಡರ್ಸ್  ಆ್ಯಂಡ್  ಬಿಲ್ಡರ್ಸ್‌ನ  ಸಿಇಒ ರಮಿತ್ ಕುಮಾರ್ ಸಿದ್ಧಕಟ್ಟೆ ವಂದಿಸಿದರು. ಕುದ್ರೋಳಿ ಗಣೇಶ್ ಅವರು ಜಾದೂ ಮೂಲಕ ರಂಜಿಸಿದರು. ಸೌಜನ್ಯ ಹೆಗ್ಡೆ  ಕಾರ್ಯಕ್ರಮ ನಿರ್ವಹಿಸಿದರು.

Similar News