×
Ad

ರಾಜ್ಯ ಸರಕಾರದಿಂದ ಕುಂದಾಪ್ರ ಕನ್ನಡ ಭಾಷೆಗೆ ಅವಮಾನ: ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಆರೋಪ

Update: 2023-02-22 21:58 IST

ಕುಂದಾಪುರ : ಬಹಳ ಕಡಿಮೆ ಜನರು ಮಾತನಾಡುವ ಭಾಷೆಗೆ ಅಕಾಡೆಮಿಗಳಿವೆ. ಆದರೆ 30 ಲಕ್ಷ ಜನ ಮಾತಾಡುವ ಕುಂದಾಪ್ರ ಕನ್ನಡವನ್ನು ಕಡೆಗಣಿಸಿರುವುದು, ನಮ್ಮ ಭಾಷೆಗೆ ಮಾಡಿದ ಅವಮಾನ. ಕುಂದಾಪ್ರ ಕನ್ನಡ ಗಡಿ ಭಾಗದಂತೆ ಯಾವುದೇ ಅನ್ಯಭಾಷಾ ಪ್ರಭಾವವನ್ನು ಹೊಂದಿಲ್ಲ. ಕುಂದಾಪುರ ಕನ್ನಡ ಅಕಾಡೆಮಿ ರಚನೆಗೆ ನಿರಾಕರಿಸಿದ ಸಚಿವ ಸುನಿಲ್ ಕುಮಾರ್ ನಡೆ ಖಂಡನೀಯ, ಅವರಿಗೆ ಆ ಖಾತೆ ನಿರ್ವಹಿಸುವ ಯೋಗ್ಯತೆ ಇಲ್ಲ ಎಂದು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಆರೋಪಿಸಿದ್ದಾರೆ.

ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ನಲ್ಲಿ ಸದಸ್ಯ ಮಂಜುನಾಥ ಭಂಡಾರಿ, ಶೂನ್ಯವೇಳೆಯಲ್ಲಿ ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ಒತ್ತಾಯಿಸಿದ್ದರು. ಬುಧವಾರ ಪರಿಷತ್‌ನಲ್ಲಿ ಬಿ.ಕೆ.ಹರಿಪ್ರಸಾದ್ ಕೂಡ ಅಕಾಡೆಮಿ ರಚನೆಗೆ ಬೆಂಬಲ ನೀಡಿದ್ದರು. ಆದರೆ ಸಚಿವರು, ಭಾಷಾ ವಿಭಿನ್ನತೆಯನ್ನು ಹೊಂದಿರುವ ಕನ್ನಡಕ್ಕೆ ಪ್ರತ್ಯೇಕ ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸುವುದು ಕನ್ನಡ ಭಾಷಾ ಸಮಗ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಲಿಖಿತ ಉತ್ತರ ನೀಡಿದ್ದರು ಎಂದು ಅವರು ತಿಳಿಸಿದರು.

ಭಾಷಾ ಸಂಶೋಧನೆಗಾಗಿ ಅಕಾಡೆಮಿ ಬೇಕು. ಲಕ್ಷ್ಮೀಶ್ವರದಲ್ಲಿ ದೊರೆತ ಶಿಲಾಶಾಸನದಲ್ಲೂ ಕುಂದಾಪ್ರ ಕನ್ನಡ ಹಾಗೂ ಪರಿಸರದ ಬಗ್ಗೆ ಉಲ್ಲೇಖ ಇದೆ. ಹಳೆಗನ್ನಡದ ಅನೇಕ ಪದಗಳು ಇಂದಿಗೂ ಉಳಿದಿರುವುದು ಕುಂದಾಪ್ರ ಕನ್ನಡದಲ್ಲಿ. ಕುಂದಗನ್ನಡ ಅಧ್ಯಯನ ಪೀಠ ಮಂಗಳೂರು ವಿವಿಯಲ್ಲಿ ರಚನೆ ಯಾಗಿದ್ದರೂ ಅನುದಾನವೂ ಇಲ್ಲ, ಅನುಷ್ಠಾನವೂ ಇಲ್ಲ ಎಂದಾಗಿದೆ. ಈಗ ಅಕಾಡೆಮಿಯೂ ಇಲ್ಲ ಎನ್ನುವ ಮೂಲಕ ನಮ್ಮನ್ನು ಕಡೆಗಣಿಸಲಾಗಿದೆ. ನಮಗೆ ನ್ಯಾಯ ದೊರೆಯದೇ ಹೋದರೆ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕಸಾಪ ಅಧ್ಯಕ್ಷ ಡಾ.ಉಮೇಶ್ ಪುತ್ರ ಮಾತನಾಡಿ, ಉತ್ತರದಲ್ಲಿ ಉತ್ತರ ಕನ್ನಡ, ದಕ್ಷಿಣ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗಳ ನಡುವಿದ್ದೂ ಎರಡರಿಂದಲೂ ಭಿನ್ನವಾಗಿ ತನ್ನದೇ ಭಾಷೆ, ಕಲೆ, ಬದುಕು, ಕಸುಬು, ಸಂಪ್ರದಾಯ, ಸಮು ದಾಯ, ಆಚರಣೆ, ಆರಾಧನೆ ಹೀಗೆ ಎಲ್ಲ ನೆಲೆಯಲ್ಲೂ ತನ್ನತನವನ್ನು, ಅನನ್ಯತೆ ಯನ್ನು ಉಳಿಸಿಕೊಂಡು ಬಂದ ನಾಡು ಕುಂದಾಪ್ರ ಎಂದರು.

ಕುಂದಪ್ರಭ ಸಂಸ್ಥೆಯ ಯು.ಎಸ್.ಶೆಣೈ, ಬಂಟರ ಯಾನೆ ನಾಡವರ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ರತ್ನಾಕರ ಶೆಟ್ಟಿ, ಗಣಪತಿ ಶ್ರೀಯಾನ್, ವೆಂಕಟೇಶ ಪೈ ಉಪಸ್ಥಿತರಿದ್ದರು.

Similar News