ಬಂದೂಕು ತೋರಿಸಿ ಜಾತಿ ನಿಂದನೆ ಆರೋಪ: ದಲಿತರ ವಿವಾಹಕ್ಕೆ ಅಡ್ಡಿಪಡಿಸಿದ 'ಬಾಗೇಶ್ವರ್ ಬಾಬಾ' ಸಹೋದರನ ವಿರುದ್ಧ ಪ್ರಕರಣ

Update: 2023-02-23 08:04 GMT

ಛಾತರ್‌ಪುರ್ (ಮಧ್ಯಪ್ರದೇಶ): ಕೆಲ ದಿನಗಳ ಹಿಂದೆ ದಲಿತರ ವಿವಾಹ ಸಮಾರಂಭದಲ್ಲಿ ಬಂದೂಕು ತೋರಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದ ಭಾಗೇಶ್ವರ್ ಧಾಮ್‌ನ ಧೀರೆಂದ್ರ ಶಾಸ್ತ್ರಿ ಅವರ ಸಹೋದರನ ವಿರುದ್ಧ ಪೊಲೀಸರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣದ ದಾಖಲಿಸಿಕೊಂಡಿದ್ದಾರೆ ಎಂದು newslaundry.com ವರದಿ ಮಾಡಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಖಂಡನೆಗೆ ಗುರಿಯಾಗಿತ್ತು.

ಇದಲ್ಲದೆ ವಿವಾಹ ಸಮಾರಂಭದಲ್ಲಿ ಜಾತಿ ನಿಂದನೆಯ ಬೈಗುಳಗಳನ್ನು ಬಳಸಿದ್ದ ಸೌರಭ್ ಗಾರ್ಗ್ ಅಲಿಯಾಸ್ ಶಾಲಿಗ್ರಾಮ್ ಇನ್ನಷ್ಟೇ ಬಂಧನವಾಗಬೇಕಿದೆ. ಬಾಗೇಶ್ವರ್ ಧಾಮ್ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಬದಲು ವಧುವಿನ ಪೋಷಕರು ಖಾಸಗಿ ವಿವಾಹ ಸಮಾರಂಭ ಏರ್ಪಡಿಸಲು ನಿರ್ಧರಿಸಿದ್ದರಿಂದ ಆತ ಕುಪಿತನಾಗಿದ್ದ ಎಂದು ಹೇಳಲಾಗಿದೆ.

ಬಾಗೇಶ್ವರ್ ಧಾಮ್ ಇರುವ ಮಧ್ಯಪ್ರದೇಶದ ಛಾತರ್‌ಪುರ್ ಜಿಲ್ಲೆಯ ಗರ್ಹ ಗ್ರಾಮದಲ್ಲಿ ಫೆ. 12ರಂದು ನಡೆದ ಆಕಾಶ್ ಅಹಿರ್ವಾರ್ ಹಾಗೂ ಸೀತಾ ಅಹಿರ್ವಾರ್ ವಿವಾಹ ಸಮಾರಂಭದ ಆರಂಭಿಕ ಗಂಟೆಗಳಲ್ಲಿ ಈ ಘಟನೆ ಜರುಗಿತ್ತು.

ಘಟನೆಯ ಕುರಿತು ಮಾಹಿತಿ ನೀಡಿರುವ ಅಕ್ತೌಹಾನ್ ಗ್ರಾಮದ ನಿವಾಸಿ ಸುರೇಶ್ ಕುಮಾರ್, "ಅಂದು ರಾತ್ರಿ 12 ಗಂಟೆಯಾಗಿತ್ತು. ಜನ ಊಟ ಮಾಡುತ್ತಿದ್ದರು ಮತ್ತು ಡಿಜೆ ಸಂಗೀತ ಬರುತ್ತಿತ್ತು. ಆಗ ದಿಢೀರನೆ ಕೆಲವು ಮಂದಿಯೊಂದಿಗೆ ಆಗಮಿಸಿದ ಶಾಸ್ತ್ರಿಯ ಸಹೋದರ ಜಗಳ ಮಾಡಲು ಪ್ರಾರಂಭಿಸಿದ. ಬೈಗುಳದೊಂದಿಗೆ ಜಾತಿ ನಿಂದನೆಯನ್ನೂ ಮಾಡಿದ. ಆತ ಪಾನಮತ್ತನಾಗಿದ್ದ" ಎಂದು ತಿಳಿಸಿದ್ದಾರೆ.

ಹೀಗಿದ್ದೂ ಗ್ರಾಮಸ್ಥರ್ಯಾರೂ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರವಷ್ಟೇ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಛಾತರ್‌ಪುರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮ, "ವಿಡಿಯೊ ಬಹಿರಂಗಗೊಂಡ ನಂತರ ತನಿಖೆಗಾಗಿ ನಾವು ತಂಡವೊಂದನ್ನು ರಚಿಸಿದ್ದೇವೆ. ತನಿಖಾ ತಂಡವು ತನ್ನ ವರದಿ ಸಲ್ಲಿಸಿದ ನಂತರ, ಆ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಘಟನೆಯ ಕುರಿತು ಫೆಬ್ರವರಿ 20ರಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಬಮಿತ ಪೊಲೀಸ್ ಠಾಣಾಧಿಕಾರಿ ಪಾರಸ್ ರಾಮ್ ದಾವರ್, " ಇನ್ನಷ್ಟೇ ಬಂಧನ ಪ್ರಕ್ರಿಯೆ ನಡೆಯಬೇಕಿದ್ದು, ತನಿಖೆ ಪ್ರಗತಿಯಲ್ಲಿದೆ " ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಲು ಸೌರಭ್ ಗಾರ್ಗ್ ಸಂಪರ್ಕಕ್ಕೆ ದೊರೆಯಲಿಲ್ಲ ಎಂದು ಹೇಳಲಾಗಿದೆ.

Similar News