ಹರೇಕಳ: ಹೈನೋದ್ಯಮ ಮತ್ತು ಕಸೋದ್ಯಮ ಕುರಿತು ಸಂವಾದ
ಮಂಗಳೂರು : ಹೈನೋದ್ಯಮ ಮತ್ತು ಕಸೋದ್ಯಮದ ಬಗ್ಗೆ ಹರೇಕಳದ ಮೈಮೂನ-ಮರ್ಝೀನ ರಾಜ್‌ಕಮಲ್ ಹಾಗೂ ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರೊಂದಿಗೆ ಗುರುವಾರ ಸಂವಾದ ನಡೆಯಿತು.
ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನ, ಹರೇಕಳ ಗ್ರಾಪಂ ಮತ್ತು ಜನಶಿಕ್ಷಣ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹರೇಕಳ ಗ್ರಾಪಂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಣಾಜೆ, ಇರಾ, ಬಾಳೆಪುಣಿ, ಹರೇಕಳ ಗ್ರಾಪಂ ಸದಸ್ಯರು, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಂಡ್ಸೆ ಗ್ರಾಪಂ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ ರಸ್ತೆ, ಸೇತುವೆ ಅಭಿವೃದ್ಧಿಯ ಭಾಗವಾದರೂ ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣವೂ ಅಭಿವೃದ್ಧಿಯ ಭಾಗವಾಗಿದೆ. ಯೋಜನೆಗಳಿಗೆ ಆದಾಯ ಮುಖ್ಯವಾದರೂ ಅಂತಿಮವಲ್ಲ, ಹೊಂದಾಣಿಕೆ, ಬದ್ಧತೆಯಿದ್ದರೆ ಯಾವುದೇ ಯೋಜನೆ ಕಷ್ಟವಲ್ಲ ಎಂದರು.
ಹರೇಕಳ ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್‌ನಗರ ಉದ್ಘಾಟಿಸಿದರು. ಉಪಾಧ್ಯಕ್ಷೆ ಕಲ್ಯಾಣಿ, ಮಾಜಿ ಅಧ್ಯಕ್ಷೆ ಅನಿತಾ ಡಿಸೋಜ, ಸದಸ್ಯರಾದ ಅಬ್ದುಲ್ ಸತ್ತಾರ್ ಬಾವಲಿಗುರಿ, ಗುಲಾಬಿ, ಮೈಮೂನ ರಾಜ್‌ಕಮಲ್, ಮರ್ಝೀನ ರಾಜ್‌ಕಮಲ್, ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್, ಉದ್ಯಮಿ ಇಬ್ರಾಹಿಂ ನಡುಪದವು ಉಪಸ್ಥಿತರಿದ್ದರು.
ನರೇಗಾದ ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಹಾಗೂ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಡೆಸಿಕೊಟ್ಟರು.