ತೊಕ್ಕೊಟ್ಟು: ಗೇರು ಮೇಳ -ವಿಚಾರ ಸಂಕಿರಣ
ಮಂಗಳೂರು, ಫೆ.23: ಅಡಕೆಯು ಶೇ.95ರಷ್ಟು ಅಗಿದು ಉಗಿಯಲು ಹೋಗುತ್ತದೆ. ಆದರೆ ಎಷ್ಟೇ ಬೆಲೆ ಕೊಟ್ಟು ತಿನ್ನುವಂತಹ ಗೇರು ಬೀಜಕ್ಕೆ ಬೆಲೆಯೇ ಇಲ್ಲ. ಮೊದಲು ಆಮದು ಮಾಡುವುದನ್ನು ನಿಲ್ಲಿಸಿ ಸ್ಥಳೀಯ ಬೆಳೆಗಾರರಿಗೆ ಆದ್ಯತೆ ನೀಡಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಗೌರವಾಧ್ಯಕ್ಷ ಧನಕೀರ್ತಿ ಬಲಿಪ ಅಭಿಪ್ರಾಯಪಟ್ಟರು.
ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ಉಳ್ಳಾಲ ವಲಯ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘ, ಮಂಗಳೂರು ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ತೊಕ್ಕೊಟ್ಟು ಕಾಪಿಕಾಡ್‌ನಲ್ಲಿ ನಡೆದ ‘ಗೇರು ಮೇಳ -2023 ಮತ್ತು ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಬೆಳೆ ನಮ್ಮ ರಕ್ತದಲ್ಲೇ ಕರಗತವಾಗಿದೆ. ಆದರೆ ಮಾರುಕಟ್ಟೆ ಯಾರದ್ದೋ ಕೈಯಲ್ಲಿದೆ. ಅಡಕೆಗೆ 450 ರೂ. ಆಗಿರುವುದರಿಂದ ಜಿಲ್ಲೆಯಲ್ಲಿ ಗುಡ್ಡದಲ್ಲೂ ಅಡಕೆ ಬೆಳೆಯಲಾಗುತ್ತದೆ. ವಿಜ್ಞಾನಿಗಳು ಗೇರು ಬೆಳೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಬೆಲೆ ಸಿಗುವಂತೆ ಮಾಡಿದರೆ ಅಡಕೆ ಗಿಡಗಳನ್ನು ಕಡಿದು ಗೇರು ಗಿಡಗಳನ್ನು ಬೆಳೆಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಧನಕೀರ್ತಿ ಬಲಿಪ ಹೇಳಿದರು.
ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾಧಿಕಾರಿ ಡಾ.ಬಿ.ಹೇಮ್ಲಾ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ. ಮೃತ್ಯುಂಜಯ ಸಿ.ವಾಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಗತಿಪರ ಕೃಷಿಕರಾದ ಬ್ಯಾಪ್ಟಿಸ್ಟ್ ಡಿಸೋಜ, ಬಿ.ಸುರೇಶ್ ಬಳ್ನಾಡು, ರಾಮಕೃಷ್ಣ ಜೆ. ಬೆಳುವಾಯಿ, ಸುಜಾತಾ ಎನ್.ರೈ ಪೊರ್ಕಳ, ಶಿವಸಂಕರ ಪಿ.ವಿ. ಅಜೆಕಾರು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ, ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಡಿ. ಗೋಪಿನಾಥ ಕಾಮತ್, ಮಂಗಳೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಕೆಂಪೇಗೌಡ, ಮಂಗಳೂರು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೆ.ಪ್ರವೀಣ್, ರೈತ ಸಂಘದ (ಹಸಿರು ಸೇನೆ) ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು.
ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ ಸ್ವಾಗತಿಸಿದರು. ಡಾ.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಆರತಿ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.