ವಿವಾದದ ಸುಳಿಯಲ್ಲಿ ಬಿಎಂಎಸ್ ವಿವಿ ಮಸೂದೆ
ಶಿಕ್ಷಣ ಸಂಸ್ಥೆಯ ಟ್ರಸ್ಟ್ ವಿರುದ್ಧದ ಭ್ರಷ್ಟಾಚಾರ ಆರೋಪದ ತನಿಖೆ ಲೋಕಾಯುಕ್ತದಲ್ಲಿ ನನೆಗುದಿಯಲ್ಲಿರುವಾಗಲೇ ರಾಜ್ಯ ಸರಕಾರದ ವಿವಾದಾತ್ಮಕ ನಡೆ
ಬೆಂಗಳೂರು: ಅಂದಾಜು 2,000 ಕೋಟಿ ರೂ.ಗೂ ಹೆಚ್ಚು ಸಂಪತ್ತು ಹೊಂದಿರುವ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಹಾಗೂ ಆಜೀವ ಟ್ರಸ್ಟಿಯ ನೇಮಕಾತಿಯ ಪ್ರಸ್ತಾವನೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರಸಮಿತಿಯು 3 ತಿಂಗಳ ಹಿಂದೆಯೇ ನೀಡಿದ್ದ ದೂರು ಲೋಕಾಯುಕ್ತದಲ್ಲಿ ತೆವಳುತ್ತಿರುವ ನಡುವೆಯೇ ರಾಜ್ಯ ಬಿಜೆಪಿ ಸರಕಾರವು ಬಿಎಂಎಸ್ ವಿಶ್ವವಿದ್ಯಾಲಯ ಕಾಯ್ದೆ 2023 ರೂಪಿಸುವ ಉದ್ದೇಶದಿಂದ ತರಾತುರಿಯಲ್ಲಿ ಮಸೂದೆ ಮಂಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಬಿಎಂಎಸ್ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆ ತಿರಸ್ಕೃತಗೊಳಿಸಿದ್ದರು. ಹಾಲಿ ಬಿಜೆಪಿ ಸರಕಾರದ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು. ಈ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು 2022ರ ಅಕ್ಟೋಬರ್ 18ರಂದು ನೀಡಿದ್ದ ದೂರು ಇದುವರೆಗೂ ಅಪರ ವಿಚಾರಣಾಧಿಕಾರಿಗಳ(11) ಬಳಿ ಇದೆ.
3 ತಿಂಗಳ ಹಿಂದೆಯೇ ಸಲ್ಲಿಕೆಯಾಗಿರುವ ದೂರನ್ನಾಧರಿಸಿ ಪ್ರತಿವಾದಿಗಳಾದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಬಿ.ಎಸ್. ಯಡಿಯೂರಪ್ಪ, ಐಎಎಸ್ ಅಧಿಕಾರಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಸೇರಿದಂತೆ ಯಾರಿಗೂ ಯಾವುದೇ ನೋಟಿಸ್ ಕೂಡ ನೀಡಿಲ್ಲ.
ಈ ಪ್ರಕರಣದ ಕುರಿತಾಗಿ ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಮಧ್ಯೆ ವಾಕ್ಸಮರ ನಡೆದಿತ್ತು. ಇದೊಂದು ಗಂಭೀರ ಪ್ರಕರಣವಾಗಿದ್ದರೂ ತನಿಖೆ ನಡೆಸಬೇಕಿದ್ದ ಲೋಕಾಯುಕ್ತ ಸಂಸ್ಥೆಯು ಮೂರು ತಿಂಗಳಾದರೂ ಪ್ರಾಥಮಿಕ ವಿಚಾರಣೆಯನ್ನೇ ಕೈಗೆತ್ತಿಕೊಳ್ಳದೆ ವಿಳಂಬ ಧೋರಣೆ ಅನುಸರಿಸಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಲೋಕಾಯುಕ್ತರು ಸರಕಾರದ ಕೈಗೊಂಬೆಯಾಗಿ ಸರಕಾರದ ಭಾಗವಾಗಿರುವ ಮಂತ್ರಿಗಳು ಸೇರಿದಂತೆ ಪ್ರಭಾವಿಗಳ ವಿರುದ್ಧ ದಾಖಲೆ ಸಹಿತ ನೀಡಿದ ದೂರುಗಳನ್ನು ಕಸದ ಬುಟ್ಟಿಗೆ ಎಸೆಯುವ ಕೆಟ್ಟ ಚಾಳಿಯನ್ನು ಮುಂದುವರಿಸಿರುವುದು ದುರಂತ. ಪ್ರಕರಣ ಲೋಕಾಯುಕ್ತರ ಅಂಗಳದಲ್ಲಿದ್ದರೂ ಸರಕಾರದ ಪ್ರಭಾವಿ ಮಂತ್ರಿಗಳಾದ ಅಶ್ವತ್ಥನಾರಾಯಣ, ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿಯವರ ಮುತುವರ್ಜಿಯಿಂದ ಬಿಎಂಎಸ್ ಟ್ರಸ್ಟ್‌ನ ಶಿಕ್ಷಣ ಸಂಸ್ಥೆಯನ್ನು ಖಾಸಗಿ ವಿಶ್ವವಿದ್ಯಾನಿಲಯದ ಮಾನ್ಶತೆ ನೀಡಲು ಹೊರಟಿರುವುದು ೨ ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಶದ ಆಸ್ತಿಯನ್ನು ಲಪಟಾಯಿಸಲು ವಾಮ ಮಾರ್ಗದಿಂದ ನೀತಿ ಭ್ರಷ್ಟಾಚಾರಕ್ಕಿಳಿದಿರುವುದು ಸ್ಪಷ್ಟವಾಗಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಮಲ್ಲಿಕಾರ್ಜುನ್ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ವಿವರ: ಬಿಎಂಎಸ್ ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ೨೦೧೮ರಲ್ಲಿಯೇ ಕಡತ (ED 124 TEC 2018) ಸೃಷ್ಟಿಯಾಗಿತ್ತು. ಇದೇ ಕಡತದಲ್ಲಿ ಪ್ರಸ್ತಾವನೆಯು ಕಾನೂನುಬಾಹಿರವಾಗಿದೆ ಎಂದು ಲಿಖಿತ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.
ಡೋನರ್ ಟ್ರಸ್ಟಿ ರಾಗಿಣಿ ನಾರಾಯಣ್ ಮತ್ತು ಅವರ ನಂತರ ಡೋನರ್ ಟ್ರಸ್ಟಿ ಸ್ಥಾನಕ್ಕೆ ನಾಮಕರಣ ಮಾಡಲ್ಪಡುವ ಯಾವುದೇ ಕುಟುಂಬದ ಸದಸ್ಯರು ತಮ್ಮ ಇಡೀ ಜೀವನಾವಧಿಯಲ್ಲಿ ದತ್ತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಬೇಕೆಂದು ತಿದ್ದುಪಡಿಯಿಂದ ನಿಗದಿಮಾಡಲಾಗುತ್ತಿದೆ. ದತ್ತಿಯ ಮೂಲ ದಾಖಲೆ ಕಂಡಿಕೆ V(x)ರಂತೆ ಟ್ರಸ್ಟಿಗಳು ಸೂಕ್ತ ವ್ಯಕ್ತಿಯನ್ನು ಆಡಳಿತದ ನಿರ್ವಹಣೆಗಾಗಿ ಕಾರ್ಯದರ್ಶಿ ಸ್ಥಾನದಲ್ಲಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದ್ದು ಟ್ರಸ್ಟಿಗಳ ಅಧಿಕಾರವನ್ನು ಶಾಶ್ವತವಾಗಿ ಕೇಂದ್ರೀಕರಿಸಲು ಉದ್ದೇಶಿಸಿತ್ತು.
ಡೋನರ್ ಟ್ರಸ್ಟಿಯವರ ಕುಟುಂಬದಿಂದ ನೇಮಕವಾಗುವ ಯಾವುದೇ ವ್ಯಕ್ತಿಯ ವಯಸ್ಸು ಮತ್ತು ಅರ್ಹತೆಯನ್ನು ಲಕ್ಷಿಸದೇ ದತ್ತಿಯ ಸದಸ್ಯ ಕಾರ್ಯದರ್ಶಿ ಪದವಿಯನ್ನು ನಿರ್ವಹಿಸುವವರಾಗುತ್ತಾರೆ. ಇದರಿಂದ ಸಾರ್ವಜನಿಕ ದತ್ತಿಯ ರೂಪದಲ್ಲಿರುವ ಬಿಎಂಎಸ್ ಶಿಕ್ಷಣ ದತ್ತಿಯ ನಿರ್ವಹಣೆಯ ಅಧಿಕಾರ ಸೂತ್ರವನ್ನು ಒಂದೇ ಕುಟುಂಬದಲ್ಲಿ ಕೇಂದ್ರೀಕರಿಸಲಾಗುತ್ತದೆ. ಇದರಿಂದ ಡೋನರ್ ಟ್ರಸ್ಟಿ ಸ್ಥಾನದ ಅಧಿಕಾರವು ಹೆಚ್ಚುವುದಲ್ಲದೇ ಮೂಲ ದತ್ತಿಯಲ್ಲಿ ಅಡಕವಾಗಿರುವ ಇತರ ಟ್ರಸ್ಟಿಗಳ ಅಧಿಕಾರವನ್ನು ಕುಂಠಿತಗೊಳಿಸಿದಂತಾಗುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಕುಮಾರನಾಯಕ್ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಹಾಲಿ ಉಪ ಕಾರ್ಯದರ್ಶಿ ವೆಂಕಟೇಶಯ್ಯ (ಹಿಂದಿನ ಅಧೀನ ಕಾರ್ಯದರ್ಶಿ) ಕಡತದಲ್ಲಿದ್ದ ಲಿಖಿತ ಆಕ್ಷೇಪಣೆಗಳನ್ನು ಕಸದಬುಟ್ಟಿಗೆ ಎಸೆದಿದ್ದರು. ಅಲ್ಲದೆ 2019ರಲ್ಲಿ (ED 124 TEC P1 2018) ಕಡತವನ್ನು ತೆರೆದಿದ್ದರು. ಹಾಗೆಯೇ ಈ ಕಡತವನ್ನು 2020ರ ಮಾರ್ಚ್ 17ರಂದು ಉನ್ನತ ಶಿಕ್ಷಣ ಸಚಿವರ ಕಚೇರಿಗೆ ರವಾನಿಸಲಾಗಿದೆ. ಬಳಿಕ ಒಂದು ವರ್ಷದ ನಂತರ ಅಂದರೆ ಯಡಿಯೂರಪ್ಪ ಅವರ ಅಧಿಕಾರದ ಕೊನೆಯ ದಿನಗಳಲ್ಲಿ ಈ ಕಡತಕ್ಕೆ (ED 124 TEC P1 2018) ಅನುಮೋದನೆ ಪಡೆದುಕೊಂಡಿದ್ದರು.
ಕಾನೂನುಬಾಹಿರವೆಂದು ಹೇಳಲಾಗಿರುವ ಪ್ರಸ್ತಾವನೆಯನ್ನು ಬಿಎಂಎಸ್ ಶಿಕ್ಷಣ ದತ್ತಿಯ ಟ್ರಸ್ಟಿಗಳಾದ ರಾಗಿಣಿ ನಾರಾಯಣ್, ಪಿ. ದಯಾನಂದ ಪೈ, ಮದನಗೋಪಾಲ್ (ನಿವೃತ್ತ ಐಎಎಸ್ ), ಅವಿರಾಮ್ ಶರ್ಮಾ (ರಾಗಿಣಿ ನಾರಾಯಣ್ ತಂಗಿ ಮಗ) ಹಾಗೂ ಸರಕಾರದ ನಾಮನಿರ್ದೇಶಿತ ಟ್ರಸ್ಟಿಗಳಿಂದ ತಿದ್ದುಪಡಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ಶಿಕ್ಷಣ ದತ್ತಿಯ ಟ್ರಸ್ಟ್ ಡೀಡ್ ತಿದ್ದುಪಡಿಗಾಗಲೀ, ಟ್ರಸ್ಟಿಗಳ ನೇಮಕಾತಿಯಾಗಲೀ ಮಾಡಲು ಸರಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಈ ವಿಷಯಗಳು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬರುತ್ತವೆ. ಹಾಗಿದ್ದರೂ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳು ಕಾರ್ಯವ್ಯಾಪ್ತಿ ಮೀರಿ ಅಧಿಕಾರ ದುರ್ಬಳಕೆಪಡಿಸಿಕೊಂಡು ಸಾರ್ವಜನಿಕ ದತ್ತಿಯನ್ನು ಖಾಸಗಿ ದತ್ತಿಯನ್ನಾಗಿ ಪರಿವರ್ತಿಸಲು ನೆರವಾಗಿರುವುದು (ಸರಕಾರದ ಪತ್ರ ED 128 TEC 2018, 31-03-2021) ಸ್ಪಷ್ಟವಾಗಿದೆ. ಹಾಗೆಯೇ ಈ ಪತ್ರದ ಬಗ್ಗೆ ಹಲವಾರು ಲಿಖಿತ ದೂರುಗಳಿದ್ದರೂ ಸರಕಾರವು ಯಾವುದೇ ಕ್ರಮತೆಗೆದುಕೊಂಡಿಲ್ಲ.
ಬಿಎಂಎಸ್ ಶಿಕ್ಷಣ ದತ್ತಿ ಅಡಿಯಲ್ಲಿರುವ ಎರಡು ಅನುದಾನಿತ ಸಂಸ್ಥೆಗಳಿಗೆ ಸರಕಾರವು 1952ರಿಂದ ಇಲ್ಲಿಯವರೆಗೆ ಸುಮಾರು 800 ಕೋಟಿ ರೂ.ಗೂ ಅಧಿಕ ಅನುದಾನ ನೀಡಿದೆ. ಹೈಕೋರ್ಟ್ (ಮೊಕದ್ದಮೆ ಸಂಖ್ಯೆ RFA 788/2009) ಮಾಡಿದ್ದ ಆದೇಶದ ಪ್ರಕಾರ ಬಿಎಂಎಸ್ ಶಿಕ್ಷಣ ದತ್ತಿಗೆ ಟ್ರಸ್ಟಿಗಳ ನೇಮಕಾತಿ ಬಗ್ಗೆ ನಿರ್ದಿಷ್ಟ ನಿಯಮಾವಳಿಗಳನ್ನು ಸೂಚಿಸಿದೆ ಮತ್ತು ಬಿಎಂಎಸ್ ಶಿಕ್ಷಣ ದತ್ತಿಯು ಆದಾಯ ತೆರಿಗೆ ಇಲಾಖೆಯಿಂದ 80 ಜಿ ವಿನಾಯಿತಿ ಹೊಂದಿರುವುದರಿಂದ ಯಾವುದೇ ಟ್ರಸ್ಟ್ ಡೀಡ್‌ಗೆ ತಿದ್ದುಪಡಿಯಾಗಲೀ ಅಥವಾ ಟ್ರಸ್ಟಿಗಳ ನೇಮಕಾತಿಯಾಗಲೀ ಆದಾಯ ತೆರಿಗೆ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಇದನ್ನು ಪಡೆದಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಯಾನಂದ ಪೈ ಮತ್ತು ರಾಗಿಣಿ ನಾರಾಯಣ ಅವರು ಬಿಎಂಎಸ್ ಶಿಕ್ಷಣ ಸಂಸ್ಥೆಯ ಸಂಪೂರ್ಣ ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದಕ್ಕೆ ಉನ್ನತ ಶಿಕ್ಷಣ ಸಚಿವರ ಬೆಂಬಲವಿದೆ ಮತ್ತು ಹಿಂದಿನ ಮುಖ್ಯಮಂತ್ರಿಯವರ ಅವಧಿಯಲ್ಲಿ ಕಾಣದ ಕೈಗಗಳು ಟ್ರಸ್ಟಿಗಳ ಬದಲಾವಣೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿಸಿಕೊಂಡಿವೆ.
ಜೆಡಿಎಸ್ ಸಭಾತ್ಯಾಗದ ನಡುವೆಯೇ ಬಿಎಂಎಸ್ ಖಾಸಗಿ ವಿವಿ ವಿಧೇಯಕ ಅಂಗೀಕಾರ
ಬೆಂಗಳೂರು: ಬಿಎಂಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಇದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಂತದಲ್ಲಿ ಬಿಎಂಎಸ್ ಶಿಕ್ಷಣ ಸಂಸ್ಥೆಗೆ ವಿಶ್ವವಿದ್ಯಾನಿಲಯದ ಸ್ಥಾನಮಾನ ನೀಡುವ ವಿಧೇಯಕ ಜಾರಿಗೆ ತರುವುದು ಸರಿಯಲ್ಲ ಎಂದು ವಿರೋಧಿಸಿ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಸಭಾತ್ಯಾಗ ಮಾಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ೨೦೨೨ನೇ ಸಾಲಿನ ಬಿಎಂಎಸ್ ವಿಶ್ವವಿದ್ಯಾನಿಲಯ ವಿಧೇಯಕ ಮಂಡಿಸುತ್ತಿದ್ದಂತೆ ಜೆಡಿಎಸ್ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ಏರ್ಪಟ್ಟಿತ್ತು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಬಿಎಂಎಸ್ ಶಿಕ್ಷಣ ಸಂಸ್ಥೆಯ ವಿವಾದಕ್ಕೂ ಈ ವಿಧೇಯಕಕ್ಕೂ ಸಂಬಂಧವಿಲ್ಲ. ಇದು ವಿಶ್ವವಿದ್ಯಾನಿಲಯದ ಮಾನ್ಯತೆ ನೀಡಲು ತರುತ್ತಿರುವ ವಿಧೇಯಕ ಎಂದು ಸಮರ್ಥಿಸಿಕೊಂಡರು.