×
Ad

‘‘ಕರಾವಳಿಯ ಜನತೆ ಈ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ದೂರವಿಡಲಿದ್ದಾರೆ’’: ಯು.ಟಿ. ಖಾದರ್

ವಾರ್ತಾಭಾರತಿ ಚುನಾವಣಾ ವಿಶೇಷ ಸಂದರ್ಶನ ಸರಣಿ

Update: 2023-02-24 11:24 IST

ಮುಂದಿನ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅವರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟಿಪ್ಪುಬೆಂಬಲಿಗರನ್ನು ಹತ್ಯೆ ಮಾಡಬೇಕೆಂಬಂತಹ ಅಶ್ವತ್ಥನಾರಾಯಣ್, ಕಟೀಲು ಹೇಳಿಕೆಯ ಬಗ್ಗೆ ಏನೆನ್ನುತ್ತೀರಿ?

ಯು.ಟಿ. ಖಾದರ್: ಹುಟ್ಟು ಮತ್ತು ಸಾವು ದೇವರ ಕೈಯಲ್ಲಿರುವುದು. ಒಬ್ಬ ಸಾವಿನ ಬಗ್ಗೆ ಚಿಂತೆ ಮಾಡಿದರೆ, ಲಕ್ಷಾಂತರ ಜನರು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಇವರು ಕಾಂಗ್ರೆಸ್ ನಾಯಕರನ್ನು ಮೇಲೆ ಕಳಿಸಲು ನೋಡಿದರೆ ಜನರು ಇವರನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ ನಾಯಕರನ್ನು ಅಧಿಕಾರದಲ್ಲಿ ಕೂರಿಸುತ್ತಾರೆ. ಸಾಮಾನ್ಯನೊಬ್ಬ ಹೇಳಿದರೆ ಇದನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಇಲ್ಲಿ ಪ್ರಶ್ನೆಯೇನೆಂದರೆ, ಸರಕಾರವೇ ಹೇಳಿದೆ. ಹೀಗಾದಾಗ ಅಧಿಕಾರಿಗಳೂ ಮೌನವಾಗುತ್ತಾರೆ.

ಭಯ ಇದೆಯೇ ನಿಮಗೆ?

ಯು.ಟಿ. ಖಾದರ್: ಖಂಡಿತ ಭಯವಿಲ್ಲ. ನಮಗೆ ಜನರ ಆಶೀರ್ವಾದ ಮುಖ್ಯ. ಕೋಮುವಾದಿಗಳ ಠೊಳ್ಳು ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ. ಕಾಂಗ್ರೆಸ್‌ನ ಯಶಸ್ಸು, ಕಾಂಗ್ರೆಸ್‌ಗಿರುವ ಜನಬೆಂಬಲದಿಂದ ಬಿಜೆಪಿ ನಾಯಕರು ತಲೆಕೆಟ್ಟು ಈ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗೆ ಜನಪರ ಕೆಲಸ ಮಾಡಿದ್ದೇವೆ, ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಟ್ಟಿದ್ದೇವೆ, ಜನರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಏನೂ ಇಲ್ಲ. ಅದಕ್ಕಾಗಿ ಚುನಾವಣೆ ವೇಳೆ ಈ ರೀತಿಯ ವಿಚಾರ ತಂದು ಜನರನ್ನು ದಿಕ್ಕು ತಪ್ಪಿಸುವ ಮತ್ತು ಅಭಿವೃದ್ಧಿ ಕೆಲಸದ ಬಗ್ಗೆ ಕೇಳದಂತೆ ಮನಸ್ಸು ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಟೆಂಡರ್ ಅಕ್ರಮದ ಬಗ್ಗೆ ಮಾತನಾಡಿದ್ದಕ್ಕೆ, ಅಂಥದ್ದೇನೂ ನಡೆದಿಲ್ಲ, ಕಾಂಗ್ರೆಸ್‌ನವರಿಗೆ ತಲೆ ಸರಿಯಿಲ್ಲ ಎನ್ನುತ್ತಿದ್ದಾರೆ?

ಯು.ಟಿ. ಖಾದರ್: ಏನಾದರೂ ಒಂದು ಆರೋಪ ಮಾಡುವಾಗ ಆಧಾರ ಇಟ್ಟುಕೊಂಡೇ ಮಾತನಾಡುತ್ತೇವೆ. ಅವರು ನಿಜವಾಗಿಯೂ ಕಳಂಕರಹಿತರಾಗಿದ್ದರೆ ಯಾಕೆ ತನಿಖೆಗೆ ಒಪ್ಪಿಸುವುದಿಲ್ಲ? ಇತಿಹಾಸದಲ್ಲೇ ಮೊದಲ ಬಾರಿಗೆ ನೋಂದಾಯಿತ ಗುತ್ತಿಗೆದಾರರ ಸಂಘ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮುಖ್ಯಮಂತ್ರಿಗೆ, ರಾಜ್ಯಪಾಲರಿಗೆ, ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಪ್ರಧಾನಿಗೋ, ರಾಜ್ಯಪಾಲರಿಗೋ, ಮುಖ್ಯಮಂತ್ರಿಗೋ ಪತ್ರ ಬರೆದಾಗ ಪ್ರತಿಕ್ರಿಯೆ ಬರಬೇಕು. ಆದರೆ ಒಂದೂವರೆ ವರ್ಷದ ಹಿಂದೆ ಪ್ರಧಾನಿಗೆ ಬರೆದ ಪತ್ರಕ್ಕೆ, ಅದರ ಬಗ್ಗೆ ತನಿಖೆ ಮಾಡಿ ಎಂಬ ಒಂದು ಸೂಚನೆ ಕೂಡ ಬರಲಿಲ್ಲ. ಸರಕಾರ ಪ್ರಾಮಾಣಿಕವಾಗಿದ್ದರೆ ತನಿಖೆ ನಡೆಸಲಿ.

ಬಿಜೆಪಿಯ ಧರ್ಮದ ರಾಜಕಾರಣದ ಮುಂದೆ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ಜನರಿಗಿದೆಯೇ?

ಯು.ಟಿ. ಖಾದರ್: ಜನರು ಅರ್ಥಮಾಡಿಕೊಳ್ಳಬೇಕು. ಅವರಿಗೆ ಅವರ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಆಡಳಿತ ಬರಬೇಕಾದರೆ ಧರ್ಮ, ಜಾತಿ, ವರ್ಗದ ಆಧಾರದಲ್ಲಿ ಅವರು ಮತ ಕೊಡಬಾರದು.

ನೀವು ಇಷ್ಟು ವರ್ಷ ಅದನ್ನೇ ಮಾಡಿದ್ದೀರಿ, ಮುಸ್ಲಿಮ್ ತುಷ್ಟೀಕರಣ ಮಾಡಿದ್ದೀರಿ ಎಂಬುದು ಬಿಜೆಪಿ ಆರೋಪ?

ಯು.ಟಿ. ಖಾದರ್: ಕಾಂಗ್ರೆಸ್ ಯಾರನ್ನೂ ತುಷ್ಟೀಕರಣ ಮಾಡಲು ಹೋಗಿಲ್ಲ. ಸಂವಿಧಾನದಲ್ಲಿ ಯಾವ್ಯಾವ ವರ್ಗದವರಿಗೆ ಏನೇನು ಹಕ್ಕು, ರಕ್ಷಣೆ ಕೊಡಬೇಕಿತ್ತೋ ಅದನ್ನು ಮಾಡಿದ್ದೇವೆ. ರಾಜ್ಯದ ಸಂಪತ್ತು ಒಂದು ವರ್ಗದ ಸಂಪತ್ತಲ್ಲ. ಸರ್ವಜನರ ಸಂಪತ್ತಾಗಿರುತ್ತದೆ. ಬೇರೆ ಬೇರೆ ವರ್ಗದವರಿಗೆ ಕಾರ್ಯಕ್ರಮ ಹಮ್ಮಿಕೊಂಡು ಸವಲತ್ತು ಕೊಟ್ಟಿದ್ದೇವೆ. ಅದನ್ನು ರಾಜಕೀಯವಾಗಿ ತುಷ್ಟೀಕರಣ ಎಂದು ಹೇಳುವಷ್ಟಕ್ಕೆ ಬಂದುಮುಟ್ಟಿದ್ದಾರೆ.

ಇಷ್ಟು ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಅಭಿವೃದ್ಧಿ ತಂದಿದ್ದೇ ಆಗಿದ್ದರೆ ಸಾಮಾಜಿಕ ಅಸಮಾನತೆ ಇರುತ್ತಿರಲಿಲ್ಲ ಎಂಬುದು ಅವರ ಆರೋಪ?

ಯು.ಟಿ. ಖಾದರ್: ಖಂಡಿತವಾಗಿಯೂ ಒಂದು ಸರಕಾರದ ಅಭಿವೃದ್ಧಿ ಮತ್ತು ಆಡಳಿತವೆಂದರೆ ಮೊದಲು ಜನರೆಲ್ಲ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕಾದದ್ದು. ಈಗ ಜನರೇ ಸರಕಾರದ ಬಗ್ಗೆ ಆಲೋಚನೆ ಮಾಡುವ ಸ್ಥಿತಿ ಬಂದಿದೆ. ಸರಕಾರ ಜನರ ಬಗ್ಗೆ ಯೋಚಿಸುತ್ತಿಲ್ಲ. ಇವತ್ತು ದೇಶ ಒಂದು ಮಟ್ಟದಲ್ಲಿದೆ ಎಂದಾದರೆ ಅದು ಕಾಂಗ್ರೆಸ್ ಕೊಡುಗೆ ಎಂಬುದು ಎಲ್ಲರಿಗೂ ಗೊತ್ತಿದೆ. ನೀರಾವರಿ, ಶಿಕ್ಷಣ, ಕೈಗಾರಿಕೀಕರಣ, ಕ್ರೀಡೆ, ಸಂಸ್ಕೃತಿ ಯಾವುದೇ ಆಗಿರಲಿ ಇವೆಲ್ಲದರಲ್ಲೂ ಕಾಂಗ್ರೆಸ್ ಕೊಡುಗೆಯೇ ಇರುವುದು.

ಹಿಂದೂ ವಿರೋಧಿ ಎಂಬ ಆರೋಪ ಕಾಂಗ್ರೆಸ್‌ಗೆ ಯಾಕೆ ಬಂತು?

ಯು.ಟಿ. ಖಾದರ್: ಬಿಜೆಪಿಯವರು ಈಗಲ್ಲ, ಬಹಳ ಹಿಂದಿನಿಂದಲೇ ಇದನ್ನು ಮಾಡಿಕೊಂಡು ಬಂದರು. ಈ ದೇಶವನ್ನು ಎರಡಾಗಿಸಿದವರು ಯಾರು? ಒಂದು ಮುಸ್ಲಿಮ್ ಲೀಗ್, ಇನ್ನೊಂದು ಹಿಂದೂ ಮಹಾಸಭಾ. ವಿಭಜನೆ ಬೇಡವೆಂದಿದ್ದು ಕಾಂಗ್ರೆಸ್. ಆವತ್ತಿನಿಂದಲೇ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಹೇಳಿಕೊಂಡು ಬಂದಿದ್ದಾರೆ. ಈಗ ಅದರಲ್ಲಿ ಯಶಸ್ವಿಯಾಗಿದ್ದಾರೆ.  

ಟಿಪ್ಪು ಬಗ್ಗೆ ನೀವು ಮಾತನಾಡುತ್ತೀರಿ, ಸಾವರ್ಕರ್ ಬಗ್ಗೆ ಅವರು ಮಾತನಾಡುತ್ತಾರೆ. ರಾಜ್ಯದ ಜನಕ್ಕೆ ಇದು ಬೇಕೇ?

ಯು.ಟಿ. ಖಾದರ್: ಇತಿಹಾಸವನ್ನು ಇವತ್ತಿನ ರಾಜಕೀಯಕ್ಕೆ ತಂದು ಜನರನ್ನು ಒಡೆಯುವುದು ಅಗತ್ಯವಿಲ್ಲದ ವಿಚಾರ. ಇತಿಹಾಸವು ಜನರನ್ನು, ಸಮಾಜವನ್ನು ಒಟ್ಟುಗೂಡಿಸುವ ವಾತಾವರಣ ನಿರ್ಮಾಣ ಮಾಡುವುದಕ್ಕಿರುವುದೇ ಹೊರತು ಅದನ್ನು ಮುಂದಿಟ್ಟುಕೊಂಡು ಸಮಾಜವನ್ನು ವಿಭಜಿಸುವುದಾಗಬಾರದು. ಇದು ದೇಶದ್ರೋಹದ ಕೆಲಸ.

ಕಾಂಗ್ರೆಸ್ ಸಾಂಕೇತಿಕ ಪ್ರತಿಭಟನೆ ಮಾಡುತ್ತದೆ, ತಾರ್ಕಿಕ ಅಂತ್ಯಕ್ಕೆ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ ಎಂಬ ಆರೋಪವಿದೆ?

ಯು.ಟಿ. ಖಾದರ್: ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿರುವುದು ಸರಕಾರ. ಪ್ರತಿಪಕ್ಷಗಳು ಪರಿಸ್ಥಿತಿ ಹೀಗಿದೆ ಎಂಬುದನ್ನು ಜನರ ಮುಂದೆ ತರಬಹುದು, ಪ್ರತಿಭಟನೆ ಮಾಡಬಹುದು. ಅದರ ಬಗ್ಗೆ ತನಿಖೆ ನಡೆಸಿ, ಸತ್ಯಾಸತ್ಯತೆ ತಿಳಿಸುವ ಜವಾಬ್ದಾರಿ ಸರಕಾರದ್ದು. ಕಾಂಗ್ರೆಸ್ ಅಧಿಕಾರವಿದ್ದಾಗ ಜಾರ್ಜ್ ಮೇಲೆ ಆರೋಪ ಬಂತು. ಸಿಬಿಐ ತನಿಖೆಗೆ ಕೊಟ್ಟೆವು. ಡಿ.ಕೆ. ರವಿ ಪ್ರಕರಣವನ್ನೂ ಕೊಟ್ಟಿದ್ದೆವು. ಹೀಗೆ ತಾರ್ಕಿಕ ಅಂತ್ಯ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಇವರೇನು ಮಾಡುತ್ತಾರೆ?

ಹಿಂದಿನ ಚುನಾವಣೆಯಲ್ಲಿಯೂ ಕೋಮುವಾದದ ಬಳಕೆಯಾಗಿತ್ತು. ಐದು ವರ್ಷದ ಬಳಿಕ ಕರಾವಳಿಯಲ್ಲಿ ಏನು ಬದಲಾಗಿದೆ?

ಯು.ಟಿ. ಖಾದರ್: ಕರಾವಳಿಯ ಜನ ಅರ್ಥ ಮಾಡಿ ಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಿ, ರಕ್ಷಣೆ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಯಾವ ಜನಪರ ವಿಚಾರವನ್ನೂ ಮಾತನಾಡುತ್ತಿಲ್ಲ. ಬರೀ ದ್ವೇಷದ ರಾಜಕೀಯ, ಸಮಾಜ ವಿಭಜನೆ, ಅಧಿಕಾರಕ್ಕಾಗಿ ಕರಾವಳಿ ಮಾತ್ರವಲ್ಲ, ದೇಶದ ಪ್ರತಿಯೊಂದು ಹಳ್ಳಿಯನ್ನೂ ಜಾತಿ, ಧರ್ಮದ ಆಧಾರದಲ್ಲಿ, ವರ್ಗದ ಆಧಾರದಲ್ಲಿ ಛಿದ್ರ ಛಿದ್ರ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬುದ್ಧಿವಂತ ಜನ ಈ ಚುನಾವಣೆಯಲ್ಲಿ ಬಿಜೆಪಿಯಂಥ ಕೋಮುವಾದಿ ಪಕ್ಷವನ್ನು ನಾವು ಒಪ್ಪುವುದಿಲ್ಲ ಎಂಬುದನ್ನು ತೋರಿಸುತ್ತಾರೆ.

ಕರಾವಳಿಯ ಬುದ್ಧಿವಂತ ಜನರು ಯಾಕೆ ಇಂಥ ಕೋಮುಪ್ರಯೋಗಗಳಿಗೆ ಹೆಚ್ಚು ಒಳಗೊಳ್ಳುತ್ತಾರೆ?

ಯು.ಟಿ. ಖಾದರ್: ದ್ವೇಷ ಇಲ್ಲ. ಭಯವಿದೆ. ವ್ಯಾಪಾರ, ಸಾಮಾಜಿಕ ಸೇರುವಿಕೆಯಲ್ಲಿ ಎಲ್ಲ ಜಾತಿ ಧರ್ಮದವರು ಅತ್ಯಂತ ಪ್ರೀತಿ ವಿಶ್ವಾಸದಿಂದಲೇ ಇದ್ದಾರೆ. ಕಷ್ಟದಲ್ಲಿ, ಅಪಘಾತದಂತಹ ಸಂದರ್ಭದಲ್ಲಿ ಜಾತಿ ಧರ್ಮ ನೋಡದೆ ನೆರವಾಗುವವರು ಇದ್ದಾರೆ. ಕೋವಿಡ್ ಸಂದರ್ಭದಲ್ಲಿ ಕರಾವಳಿ ಜಿಲ್ಲೆ ಇಡೀ ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಯಿತು. ಭಯ, ಪರಸ್ಪರ ಅಪನಂಬಿಕೆ ಕಡಿಮೆಗೊಳಿಸುವ ಕೆಲಸ ಆಗಬೇಕಿದೆ. ಎಲ್ಲ ಧರ್ಮದವರೂ ಇದನ್ನು ಯೋಚಿಸಿದಾಗ ತನ್ನಿಂದತಾನೇ ಎಲ್ಲವೂ ಸರಿಯಾಗುತ್ತದೆ.

ನೀವು ತುಳು ಎರಡನೇ ಭಾಷೆ ವಿಚಾರ ಹೇಳಿದಿರಿ. ಅದು ರಾಜಕೀಯವಲ್ಲವೆ?

ಯು.ಟಿ. ಖಾದರ್: ಖಂಡಿತ ಅಲ್ಲ. ತುಳು ಕರಾವಳಿ ಪ್ರದೇಶ ಮಾತ್ರವಲ್ಲ, ವಿಶ್ವದ ಎಲ್ಲ ಕಡೆ ಇದೆ. ತುಳುವರು ಕೊಟ್ಟ ಕೊಡುಗೆಯನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದವರು ಬಿಜೆಪಿಯವರು. ತುಳುವನ್ನು ಎರಡನೇ ರಾಜ್ಯಭಾಷೆಯಾಗಿ ಮಾಡುವುದಾಗಿ ಹೇಳಿ, ಚುನಾವಣೆ ಬರುವಾಗ, ಅಧ್ಯಯನ ಸಮಿತಿ ಏಕೆ ಮಾಡುತ್ತಾರೆ? ಮೂರು ವರ್ಷದಿಂದ ಏಕೆ ಸುಮ್ಮನಿದ್ದರು? ತುಳುವನ್ನು ಎರಡನೇ ಭಾಷೆಯಾಗಿ ಮಾಡಬೇಕಿದ್ದಲ್ಲಿ ಅಧ್ಯಯನ ಸಮಿತಿ ಯಾಕೆ? ನಮ್ಮಲ್ಲಿ ತುಳು ಅಕಾಡಮಿ ಎಷ್ಟೋ ವರ್ಷಗಳಿಂದ ಇದೆ. ಬರಹಗಾರರಿದ್ದಾರೆ. ಪತ್ರಿಕೆಗಳಿವೆ. ತುಳು ಲಿಪಿಯಲ್ಲಿ ಪರೀಕ್ಷೆ ಬರೆಯುತ್ತಾರೆ. ಹೀಗಿರುವಾಗ ಅಧ್ಯಯನ ಏಕೆ? ನೇರವಾಗಿ ಘೋಷಿಸಬಹುದಲ್ಲವೆ? ಇದು ತುಳುನಾಡಿಗೆ ಬಿಜೆಪಿ ಮಾಡಿರುವ ಅವಮಾನ.

ನೀವು ಹಿಂದುತ್ವ ಸಂಘಟನೆಗಳ ಜೊತೆ ಚೆನ್ನಾಗಿಯೇ ಇರುತ್ತೀರಿ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?

ಯು.ಟಿ. ಖಾದರ್: ರಾಜಕೀಯವೇ ಬೇರೆ, ಮಿತ್ರತ್ವವೇ ಬೇರೆ. ರಾಜಕೀಯಕ್ಕಾಗಿ ನಾನು ಯಾರನ್ನೂ ಮಿತ್ರರು, ಶತ್ರುಗಳು ಎನ್ನಲಾರೆ. ರಾಜಕೀಯ ಮತ್ತು ಮಿತ್ರರನ್ನು ಬೆರೆಸುವುದಕ್ಕೂ ಹೋಗಲಾರೆ. ಜನರ ಪರವಾಗಿ ಮಾತನಾಡುತ್ತೇನೆ. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಇರುವುದು ಸಂಘಜೀವನ. ಅದಿದ್ದರೆ ಮಾತ್ರವೇ ಸಮಾಜವನ್ನು ಕಟ್ಟಲು ಸಾಧ್ಯ. ಪ್ರತಿಯೊಂದು ವಿಚಾರದಲ್ಲಿಯೂ ರಾಜಕೀಯ ತಂದರೆ ಯಾರೂ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ರಾಜಕೀಯಕ್ಕೋಸ್ಕರ ಸ್ನೇಹ ಬಿಡಲಾರೆ. ಎಲ್ಲಾ ಪಕ್ಷಗಳವರೊಂದಿಗೆ ನಾನು ಚೆನ್ನಾಗಿಯೇ ಇದ್ದೇನೆ.

ವ್ಯವಹಾರದಲ್ಲಿಯೂ ಇತರ ನಾಯಕರ ಜೊತೆ ನಿಮ್ಮ ಪಾಲುದಾರಿಕೆ ಇರುವುದು ಕಾರ್ಯಕರ್ತರನ್ನು ವಿಚಲಿತಗೊಳಿಸುತ್ತದೆ ಎಂಬ ಮಾತಿದೆ?

ಯು.ಟಿ. ಖಾದರ್: ಯಾವುದೇ ವ್ಯವಹಾರವನ್ನು ಯಾರ ಜೊತೆಯೂ ಇಟ್ಟುಕೊಂಡಿಲ್ಲ, ಅದರ ಅಗತ್ಯವೂ ಇಲ್ಲ. ಅದಕ್ಕೆ ಸಮಯವೂ ಇಲ್ಲ. ನಮ್ಮೆದುರು ಇರುವವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವುದು, ನಮ್ಮನ್ನು ನೋಡಿ ಇತರರೂ ಪ್ರೀತಿ ವಿಶ್ವಾಸದಿಂದ ಇರುವಂತೆ ಮಾಡುವುದು ಅಷ್ಟೆ. ನಾವು ನಾಯಕರೇ ವೇದಿಕೆಯಲ್ಲಿ ಕೋಪ, ದ್ವೇಷದ ಮಾತಾಡಿದರೆ ಕಾರ್ಯಕರ್ತರಲ್ಲಿಯೂ ಅದೇ ಭಾವನೆ ಬಂದು ಗ್ರಾಮಗ್ರಾಮಗಳಲ್ಲಿ ಸಮಾಜ ವಿಭಜನೆಯಾಗುತ್ತದೆ. ನಾವು ಸ್ನೇಹದಿಂದಿದ್ದಾಗ ಕಾರ್ಯಕರ್ತರೂ ಅಂಥ ಸ್ನೇಹ ತೋರಿಸಲು ಸಾಧ್ಯವಾಗುತ್ತದೆ. ರಾಜಕೀಯ ಬೇರೆ. ಇತರ ಸಂದರ್ಭದಲ್ಲಿ ಅದು ಬರಬಾರದು.

ಕಾಂಗ್ರೆಸ್‌ನ ಚುನಾವಣಾ ಅಜೆಂಡ ಏನು?

ಯು.ಟಿ. ಖಾದರ್: ಸೋದರತೆ, ಸಾಮರಸ್ಯ, ಸ್ವಚ್ಛ ಆಡಳಿತ. ಇದು ನಮ್ಮ ಸ್ಪಷ್ಟ ಅಜೆಂಡ. ಭ್ರಷ್ಟಾಚಾರ, ಕೋಮುವಾದ ಇವನ್ನೆಲ್ಲ ತೊಲಗಿಸುವುದೇ ಗುರಿ. ಸಂವಿಧಾನಕ್ಕನುಗುಣವಾಗಿ ಸರಕಾರ ನಡೆಸಿದರೆ ಮಾತ್ರವೇ ಜನಸಾಮಾನ್ಯರೆಲ್ಲರೂ ನೆಮ್ಮದಿಯಿಂದಿರಲು ಸಾಧ್ಯ. ಅಂಥ ಸರಕಾರವಿದ್ದರೆ ಅದು ಕಾಂಗ್ರೆಸ್ ಸರಕಾರ ಮಾತ್ರ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಭವಿಷ್ಯದ ಭಾರತಕ್ಕಾಗಿ ಆಲೋಚಿಸಿ ಮತ ಕೊಡಬೇಕು.

ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಜೆಡಿಎಸ್ ಜೊತೆ ಕೈಜೋಡಿಸಲು ಕಾಂಗ್ರೆಸ್ ಈಗಲೇ ಸಿದ್ಧತೆ ನಡೆಸಿದೆಯಾ?

ಯು.ಟಿ. ಖಾದರ್: ನಮ್ಮ ಉದ್ದೇಶ ಸ್ಪಷ್ಟ. ಸಂವಿಧಾನಾತ್ಮಕ ಸರಕಾರ ಬರಬೇಕು. ಜನರು ಸ್ಥಿರ ಮತ್ತು ಸಮರ್ಥ ಸರಕಾರವನ್ನೇ ತರುತ್ತಾರೆ ಎಂಬ ವಿಶ್ವಾಸ ನಮಗಿದೆ. ಕಾಂಗ್ರೆಸ್ ಈ ಸಲ ಸ್ಪಷ್ಟ ಬಹುಮತದೊಂದಿಗೆ ಬರುತ್ತದೆ. ಜನರು ಅಂಥ ತೀರ್ಮಾನ ಮಾಡಿದ್ದಾರೆ ಎಂಬ ನಂಬಿಕೆಯಿದೆ.

ಕರಾವಳಿಯ ಜನ ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಿ, ರಕ್ಷಣೆ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಯಾವ ಜನಪರ ವಿಚಾರವನ್ನೂ ಮಾತನಾಡುತ್ತಿಲ್ಲ. ಬರೀ ದ್ವೇಷದ ರಾಜಕೀಯ, ಸಮಾಜ ವಿಭಜನೆ, ಅಧಿಕಾರಕ್ಕಾಗಿ ಕರಾವಳಿ ಮಾತ್ರವಲ್ಲ, ದೇಶದ ಪ್ರತಿಯೊಂದು ಹಳ್ಳಿಯನ್ನೂ ಜಾತಿ, ಧರ್ಮದ ಆಧಾರದಲ್ಲಿ, ವರ್ಗದ ಆಧಾರದಲ್ಲಿ ಛಿದ್ರ ಛಿದ್ರ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬುದ್ಧಿವಂತ ಜನ ಈ ಚುನಾವಣೆಯಲ್ಲಿ ಬಿಜೆಪಿಯಂಥ ಕೋಮುವಾದಿ ಪಕ್ಷವನ್ನು ನಾವು ಒಪ್ಪುವುದಿಲ್ಲ ಎಂಬುದನ್ನು ತೋರಿಸುತ್ತಾರೆ.

Full View

Similar News