​ಉತ್ತರ ಪ್ರದೇಶ: ಬಿಎಸ್ಪಿ ಶಾಸಕನ ಹತ್ಯೆ ಪ್ರಕರಣದ ಮುಖ್ಯ ಸಾಕ್ಷಿಯ ಗುಂಡಿಕ್ಕಿ ಹತ್ಯೆ

Update: 2023-02-25 04:49 GMT

ಪ್ರಯಾಗ್‌ರಾಜ್: ಬಿಎಸ್ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅವರನ್ನು ದುಷ್ಕರ್ಮಿಗಳ ಗುಂಪು ಹಲವು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದೆ. ಸುಲೇಮ್ ಸರಾಯ್ ಪ್ರದೇಶದಲ್ಲಿರುವ ಅವರ ಮನೆಯಲ್ಲೇ ಶುಕ್ರವಾರ ಹಾಡಹಗಲೇ ನಡೆದಿರುವ ಈ ಭೀಕರ ಘಟನೆ ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿದೆ.

ದಾಳಿಯಲ್ಲಿ ಪಾಲ್ ಅವರ ಇಬ್ಬರು ಭದ್ರತಾ ಸಿಬ್ಬಂದಿ ಕೂಡಾ ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಕೋರರು ಈ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸ್ ಠಾಣೆಗೆ 200 ಮೀಟರ್‌ನಷ್ಟು ಸನಿಹದಲ್ಲಿರುವ ಸ್ಥಳದಲ್ಲೇ ಈ ಘಟನೆ ನಡೆದಿದೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಉಮೇಶ್ ಪಾಲ್ ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಭದ್ರತಾ ಸಿಬ್ಬಂದಿಯಾದ ಸಂದೀಪ್ ನಿಶಾದ್ ಮತ್ತು ರಾಘವೇಂದ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಯಾಗ್‌ರಾಜ್ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಹೇಳಿದ್ದಾರೆ.

ಪ್ರಯಾಗ್‌ರಾಜ್ ಜಿಲ್ಲಾ ಗಡಿಯನ್ನು ಮುಚ್ಚಲಾಗಿದ್ದು, ಆರೋಪಿಳ ಪತ್ತೆಗೆ 8-10 ತಂಡಗಳನ್ನು ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಜೆ 5 ಗಂಟೆಯ ಸುಮಾರಿಗೆ ದಾಳಿಕೋರರು ಬೈಕ್‌ಗಳು ಹಾಗೂ ಕಾರುಗಳಲ್ಲಿ ಪಾಲ್ ಅವರ ಮನೆಗೆ ಆಗಮಿಸಿದ್ದಾರೆ. ಪಾಲ್ ಅವರು ತಮ್ಮ ಭದ್ರತಾ ಸಿಬ್ಬಂದಿ ಜತೆ ಒಳಗೆ ಹೋಗುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಲವು ಕಚ್ಚಾ ಬಾಂಬ್‌ಗಳನ್ನು ಕೂಡಾ ದಾಳಿಕೋರರು ಎಸೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ ದಟ್ಟ ಹೊಗೆ ಆವರಿಸಿದಾಗ ಅವರು ಪರಾರಿಯಾಗಿದ್ದಾರೆ ಎಂದಿದ್ದಾರೆ. ಪಾಲ್ ನ್ಯಾಯಾಲಯದಿಂದ ಬರುತ್ತಿದ್ದಾಗಲೇ ದಾಳಿಕೋರರು ಕೂಡಾ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ಹೇಳಲಾಗಿದೆ.

Similar News